ಕೊಡಗು : ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಕಿವುಡಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಹೇಳಿದ್ದೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ದೆಹಲಿಗೆ ಹೋಗಿ ತೆರಿಗೆ ಹಂಚಿಕೆಯಲ್ಲಿ ಕಡಿಮೆ ಅನುದಾನ ಬರುತ್ತಿದೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಶಾಸಕರು , ಸಂಸದರು, ಸಚಿವರು ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದೆವು. ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದರು.
*ಕಾಮಗಾರಿಗೆ ಅನುದಾನ ನೀಡಿ ಶೀಘ್ರಗತಿಯಲ್ಲಿ ಪೂರ್ಣ
ಒಂಭತ್ತು ವರ್ಷಗಳ ನಂತರ ಮೇಲ್ಸೇತುವೆ ಉದ್ಘಾಟನೆಯಾಗುತ್ತಿರುವ ಬಗ್ಗೆ ಮಾತನಾಡಿ 2016 ರಲ್ಲಿ ನಮ್ಮ ಸರ್ಕಾರ ಕಾಮಗಾರಿಗೆ ಮಂಜೂರಾತಿ ಕೊಟ್ಟು, 2017 ರಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಅದನ್ನು ಪೂರ್ಣಮಾಡದೇ ವಿಳಂಬವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನವನ್ನು ನೀಡಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ ಎಂದರು.
ಕೊಡಗಿನಲ್ಲಿ ಸಿ ಅಂಡ್ ಡಿ ಭೂಮಿ ಮತ್ತು ಸೆಕ್ಷನ್ 4 ಅಧಿಸೂಚಿತ ಜಾಗವನ್ನು ಮೀಸಲು ಅರಣ್ಯ ಮಾಡುವ ಪ್ರಸ್ತಾವಕ್ಕೆ ರೈತರು ವ್ಯಾಪಕ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಕುರಿತು ಸಮಿತಿ ರಚಿಸಬೇಕಾಗುತ್ತದೆ. ಸಮಿತಿ ವರದಿ ಕೊಟ್ಟ ನಂತರ ಸರ್ಕಾರ ಕ್ರಮ ವಹಿಸಲಿದೆ ಎಂದರು.
*ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ
ಸರ್ಕಾರಿ ಭೂಮಿ ಭೂ ಗುತ್ತಿಗೆ ನೀಡುವುದಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಾತನಾಡಿ ಸರ್ಕಾರಿ ಭೂಮಿ ಕೊಟ್ಟರೆ ವಿರೋಧ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ನಿವೇಶನ ಇಲ್ಲದಿರುವವರಿಗೆ, ಜಮೀನು ಇಲ್ಲದವರಿಗೂ ಭೂಮಿ ಕೊಡುತ್ತೇವೆ ಎಂದರು.
*ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ
ವನ್ಯಜೀವಿ ಮಾನವ ಸಂಘರ್ಷ ಕಾಡಿಂಚಿನ ಊರುಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ.. ಆನೆಗಳು, ಚಿರತೆಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹಾಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ ಕೈಕೊಳ್ಳಲಾಗುವುದು ಎಂದರು.
ಕಾವೇರಿ ನದಿ ಸ್ವಚ್ಛತೆಯ ಬಗ್ಗೆ ರಚಿಸಲಾಗಿದ್ದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಭಾರತ ಬಹುತ್ವದ ಪ್ರಜಾಪ್ರಭುತ್ವವಾದಿ ದೇಶ: ಒಂದು ದರ್ಮದ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಡಗು : ಬಹಳ ಜನ ಬಹುತ್ವದ ಭಾರತವನ್ನು ಒಂದು ಧರ್ಮದ ರಾಷ್ಟ ಎನ್ನುತ್ತಾರೆ. ಭಾರತ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಬಹುತ್ವದ ರಾಷ್ಟ್ರ. ಇದನ್ನು ಒಂದು ಧರ್ಮಕ್ಕೆ ಸೇರಿದ ಸಾರ್ವಭೌಮ ರಾಷ್ಟವನ್ನಾಗಿ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ಭಾಗಮಂಡಲದ ಹತ್ತಿರ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು –ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಧರ್ಮಗಳು, ಜನರು, ಜಾತಿಗಳೂ ಕೂಡ ಸಮಾನ. ಅದಕ್ಕಾಗಿಯೇ ಸಂವಿಧಾನದಲ್ಲಿ ಸಹಿಷ್ಣುತೆ ಹಾಗೂ ಸಹಬಾಳ್ವೆ ಇರಬೇಕು ಎಂದಿರುವುದು. ನಮ್ಮ ಧರ್ಮವನ್ನು ಪ್ರೀತಿಸಿ ಗೌರವಿಸಬೇಕು. ಆದರೆ ಇನ್ನೊಂದು ಧರ್ಮವನ್ನು ಅಲ್ಲಗಳೆಯಬಾರದು. ಅದನ್ನೇ ಸಹಿಷ್ಣುತೆ ಎನ್ನುತ್ತಾರೆ. ಸಹಿಸ್ಣುತೆ ಇದ್ದಾಗ ಮಾತ್ರ ನಾವು ಮಾನವರಾಗಿ ಬಾಳಲು ಸಾಧ್ಯವಾಗುತ್ತದೆ. ಕುವೆಂಪು ಅವರು ಹುಟ್ಟುವಾಗ ಎಲ್ಲರೂ ವಿಶ್ವ ಮಾನವರಾಗಿರುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಹೇಳಿದ್ದರು. ನಾವೆಲ್ಲರೂ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲಾಗಿದೆ.
ಯಾವ ಪಕ್ಷ ನುಡಿದಂತೆ ನಡೆಯುತ್ತದೆ, ಜನಪರವಾಗಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ಎಂಟು ತಿಂಗಳಲ್ಲಿ ಪ್ರಮುಖವಾಗಿ ಭರವಸೆ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದೊಳಗೆ ಈಡೇರಿಸಿದ್ದೇವೆ. ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿನ ಎಲ್ಲಾ ಜಾತಿಯ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಿರುವುದು ನಮ್ಮ ಸರ್ಕಾರ ಎಂದರಲ್ಲದೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಾಜದಲ್ಲಿ ಸಮಾನತೆಯನ್ನು ತರುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.
*ಭ್ರಾತೃತ್ವ ಬೆಳೆಸಿ, ಭಾರತೀಯರಾಗಿ ಬದುಕಬೇಕು
ಕೊಡಗಿನ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ಯಾವ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಯೋಚಿಸಬೇಕು. ಭಾರತ ದೇಶ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು. ಧ್ವೇಷ ಮಾಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದುದು ಎಂದರು.
ನಮ್ಮ ಸರ್ಕಾರ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಿದೆ. ಪ್ರತಿ ಸರ್ಕಾರವೂ ತನ್ನ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಸಂವಿಧಾನವು ಸ್ವಾತಂತ್ರö್ಯ ಸಮಾನತೆ, ಭ್ರಾತೃತ್ವವನ್ನು ಸಾರುತ್ತದೆ. ಭ್ರಾತೃತ್ವವನ್ನು ನಾವು ಬೆಳೆಸಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯ. ಮೂಲತ: ಮನುಷ್ಯರಾಗಿರುವ ನಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಅಂತಿಮವಾಗಿ ಜಾತಿ ವ್ಯವಸ್ಥೆ ತೊಲಗಿ ಭಾರತೀಯರಾಗಿ ಬದುಕಬೇಕು. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ ಎಂದರು.
*ಕೊಡಗಿಗೆ ಅಭಿವೃದ್ಧಿಗೆ ಅನುದಾನ
ಭಾಗಮಂಡಲದಲ್ಲಿ ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳ ಸಂಗಮವನ್ನು ತ್ರಿವೇಣಿ ಸಂಗಮವಾಗಿದೆ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಅನುದಾನ ನೀಡಿದಂತೆ, ಈ ಬಾರಿಯೂ ಕೊಡಗಿನ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದರು.
*ನುಡಿದಂತೆ ನಡೆದ ಸರ್ಕಾರ
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಜಯಗೊಳಿಸಿದ ಕೊಡುಗಿನ ಜನತೆಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. 2013-18ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪಕ್ಷ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ , ತಾನು ನೀಡಿದ್ದ ಭರವಸೆಗಳಲ್ಲಿ ಶೇ.10 ರಷ್ಟನ್ನು ಕೂಡ ಈಡೇರಿಸಲಿಲ್ಲ ಎಂದರು.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಫಲಾನುಭವಿಗಳ ಖಾತೆಗೆ ಹಣ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.
*ಸಿ ಅಂಡ್ ಡಿ ಭೂಮಿ: ಸಮಿತಿ ರಚನೆ
ಸಿ ಅಂಡ್ ಡಿ ಭೂಮಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ, ಅದರ ವರದಿಯಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
*ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಸುಗ್ರೀವಾಜ್ಞೆ
ಈ ಭಾಗದ ಜನರು ಮೈಕ್ರೋಫೈನಾನ್ಸ್ ನಿಂದ ಅನುಭವಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಸಧ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು.q