ಬೆಳಗಾವಿ : ಮಹತ್ವದ ಕಾರ್ಯಾಚರಣೆ ನಡೆಸಿದ ಹುಕ್ಕೇರಿ ಪೊಲೀಸರು ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣವನ್ನು ಇದೀಗ ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ ಪಿ ಡಾ. ಭೀಮಾಶಂಕರ್ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಹುಕ್ಕೇರಿ ತಾಲೂಕು ಸುಲ್ತಾನಪುರ ಗ್ರಾಮದ ಲಕ್ಷ್ಮಿ ಗೋಲಬಾವಿ, ಸದಾಶಿವ ಮಗದುಮ್ಮ,
ಹಳಿಯಾಳ ತಾಲೂಕಿನ ಕೆಸರೊಳ್ಳಿಯ ಅನಸೂಯಾ ದೊಡ್ಡಮನಿ, ಮಹಾರಾಷ್ಟ್ರದ ಕೊಲ್ಲಾಪುರದ ಸಂಗೀತಾ ಸಾವಂತ್ ಬಂಧಿತರಾಗಿದ್ದಾರೆ. ಸದಾಶಿವ ಮಗದುಮ್ಮ ಅವರೊಂದಿಗೆ ಮದುವೆಯಾಗಿದ್ದ ಸಂಗೀತಾಗೆ ಮೊದಲೇ ಒಂದು ಮಗುವಿತ್ತು. ಇದರಿಂದ ತಮ್ಮ ವೈವಾಹಿಕ ಸಂಬಂಧಕ್ಕೆ ತೊಡಕು ಆಗದೆ ಇರಲಿ ಎಂದು ಬೇರೆಯವರಿಗೆ ಮಧ್ಯವರ್ತಿಗಳ ಮೂಲಕ ಕೊಡೋಣ ಎಂದು ದಿಲ್ ಶಾದ್ ಅವರಿಗೆ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ. ಮೂರು ತಿಂಗಳ ನಂತರ ಮಗು ಬೇಕು ಎಂದು ತಾಯಿ ಹಠ ಹಿಡಿದು ಜನವರಿ 15ರಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಖಾನಾಪುರ ತಾಲೂಕು ಲೋಂಡಾದ ಭರತ್ ಪೂಜಾರಿ, ಬೆಳಗಾವಿಯ ದಿಲ್ಶಾದ್ ತಹಸೀಲ್ದಾರರ ಪತ್ತೆಗೆ ಜಾಲ ಬೀಸಲಾಗಿದ್ದು ರಕ್ಷಣೆ ಮಾಡಲಾಗಿರುವ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ. ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಂ.ಕೆ. ಬಸಾಪುರ ನೇತೃತ್ವದಲ್ಲಿ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದ ಎಂದು ತಿಳಿಸಿದರು.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಪೊಲೀಸರು ಮಮದಾಪುರ ಹೊರವಲಯದಲ್ಲಿ ಕೊಳವಿಯ ಪ್ರಕಾಶ ಮಾರುತಿ ಹಿರಟ್ಟಿ ಅವರನ್ನು ಜನವರಿ 14ರಂದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸೇರಿ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ ಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.