ವಿಂಗ್ ಕಮಾಂಡರ್ ಅಭಿನಂದನರು ಕೇವಲ ಎರಡು ದಿನ ಪಾಕಿಸ್ತಾನದಲ್ಲಿ ಇದ್ದುದಕ್ಕೆ ಇಡೀ ದೇಶಕ್ಕೆ ದೇಶವೇ ತಲ್ಲಣಗೊಂಡಿತ್ತು…ಅಂತಹಾ ಕ್ರೂರ ಮನಸ್ಥಿತಿಯವರು ಪಾಕಿಗಳು. ಅಂತಹಾ ದುರ್ಜನರ ನಡುವೆ ಒಂದು ವರ್ಷ ಸೆರೆವಾಸ ಅನುಭವಿಸಿ ಹೊರಬಂದ ನಮ್ಮ ಸೈನಿಕರ, ಅದರಲ್ಲೂ ಈ ಮೂವರು ಫೈಟರ್ ಪೈಲಟ್ಟುಗಳ ಸಾಹಸಗಾಥೆಯನ್ನು ಓದಿ.
The Great Escape
16 ಡಿಸೆಂಬರ್ 1971..ಅಮೆರಿಕ ಮತ್ತು ಯೂರೋಪಿನ ರಾಷ್ಟ್ರಗಳು ಬೆಕ್ಕಸ ಬೆರಗಾಗಿ, ಮೂಗಿನ ಮೇಲೆ ಬೆರಳಿಟ್ಟುಕೊಂಡು ಭಾರತ ಮತ್ತು ಪಾಕೀಸ್ತಾನದ ಕಡೆ ಎವೆಇಕ್ಕದೆ ನೋಡತೊಡಗಿದವು. ಸನ್ನಿವೇಶ ಹಾಗಿತ್ತು…ಬರೋಬ್ಬರಿ 93 ಸಾವಿರ ಪಾಕಿಸ್ತಾನದ ಸೈನ್ಯದ ಅಧಿಕಾರಿಗಳು ಮತ್ತು ಸೈನಿಕರು ಭಾರತದ ಸೈನ್ಯಕ್ಕೆ ಶರಣಾಗತರಾದರು. ಎರಡನೇ ವಿಶ್ವಯುಧ್ಧದ ನಂತರ ಯಾವುದೇ ದೇಶ ಇಂತಹ ವಿಜಯನ್ನು ಸಾಧಿಸಿ ಶತ್ರುಗಳನ್ನು ಈ ಮಟ್ಟದ ಹೀನಾಯವಾಗಿ ಶರಣಾಗುವಂತೆ ಮಾಡಿದ ಉದಾಹರಣೆಗಳಿರಲಿಲ್ಲ. ಇದು ಅಂದಿನ ಪೂರ್ವ ಪಾಕಿಸ್ತಾನದಲ್ಲಾದ ಕಾರ್ಯಾಚರಣೆ. ಆದರೆ 1971ರ ಯುಧ್ಧ ಬರೀ ಅಲ್ಲಿಗೇ ಸೀಮಿತವಾಗಿರಲಿಲ್ಲ. ಪಶ್ಚಿಮದಲ್ಲೂ, ರಾಜಾಸ್ತಾನ, ಕಾಶ್ಮೀರದಲ್ಲೂ ಘಮಾಸಾನ್ ಯುಧ್ಧ ನಡೆಯಿತು. ಫ್ಲೈಯಿಂಗ್ ಆಫೀಸರ್ ನಿರ್ಮಲ್ಜಿತ್ ಸೇಖೋನ್ ಆಕಾಶದಲ್ಲಿ ಏಕಾಂಗಿಯಾಗಿ ಅಭಿಮನ್ಯುವಿನಂತೆ ಹೋರಾಡಿ ಪಾಕೀಸ್ತಾನದ ನಾಲ್ಕು ಸೇಬರ್ ಜೆಟ್ ವಿಮಾನಗಳನ್ನು ಧ್ವಂಸಗೊಳಿಸಿ ಶ್ರೀನಗರವನ್ನು ರಕ್ಷಿಸಿದ ಸಾಹಸಗಾಥೆ ವಾಯುದಳದ ಆತ್ಮಸ್ಥೈರ್ಯವನ್ನು ಮುಗಿಲಿಗೇರಿಸಿತು. ಭಾರತೀಯ ವಾಯುದಳದ ವಿಮಾನಗಳು ಎಗ್ಗಿಲ್ಲದೆ ಪಾಕೀಸ್ತಾನದೊಳಗೆ ನುಗ್ಗಿ ಮನಸೋ ಇಚ್ಚೆ ದಾಳಿಮಾಡಲಾರಂಭಿಸಿದರು. ಪಾಕೀಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿ, ವಿಮಾನಗಳನ್ನು, ರನ್ ವೇಗಳನ್ನು ಧ್ವಂಸಗೊಳಿಸಿದರು. ಸೇತುವೆಗಳು, ರೈಲ್ವೇ ಲೈನುಗಳು, ಆಯುಧ ಡಿಪೋಗಳು, ಸೈನ್ಯದ ಶಿಬಿರಗಳು ಒಂದನ್ನೂ ಬಿಡಲಿಲ್ಲ. ಕೆಲವು ಭಾರತದ ವಿಮಾನಗಳೂ ಪತನಗೊಂಡವು, ಕೆಲವು ಭಾರತದ ಫೈಟರ್ ಪೈಲಟ್ಟುಗಳು ಪಾಕೀಸ್ತಾನದಲ್ಲಿ ಯುಧ್ಧ ಕೈದಿಗಳಾದರು. ಒಟ್ಟು ಹನ್ನೆರಡು ಭಾರತೀಯ ಪೈಲಟ್ಟುಗಳು ಪಾಕೀಸ್ತಾನದಲ್ಲಿ ಸುಮಾರು ಒಂದು ವರ್ಷಗಳ ಕಾಲ ಯುಧ್ಧ ಕೈದಿಗಳಾಗಿರಬೇಕಾಯಿತು.
ಆದರೆ ವಿಪರ್ಯಾಸ ನೋಡಿ, ಭಾರತಕ್ಕೆ ಶರಣಾದ 93 ಸಾವಿರ ಪಾಕೀಸ್ತಾನಿ ಯುಧ್ಧಕೈದಿಗಳನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ನೇರ ಆದೇಶದ ಮೇರೆಗೆ 2 ಆಗಸ್ಟ್ 1972 ರಂದು ನಡೆದ ಸಿಮ್ಲಾ ಒಪ್ಪಂದದ ಪ್ರಕಾರ ಬಿಡುಗಡೆ ಮಾಡಲಾಯಿತು. ಆದರೆ ಹನ್ನೆರಡು ಫೈಟರ್ ಪೈಲಟ್ಟುಗಳು ಸೇರಿದಂತೆ ಸುಮಾರು ಐನೂರು ಜನ ಭಾರತೀಯ ಸೈನಿಕರನ್ನು ಒಂದಲ್ಲಾ ಒಂದು ಕಳ್ಳ ನೆಪ ಹೇಳುತ್ತಾ ಬಿಡುಗಡೆ ಮಾಡಲೇ ಇಲ್ಲ. ಯುದ್ಧ ಮುಗಿದು 5-6 ತಿಂಗಳುಗಳಾದರೂ ಸಹ ಬಿಡುಗಡೆಯ ದಿನ ಘೋಷಿಲಿಲ್ಲದಿದ್ದಾಗ ಈ ಪೈಲಟ್ಗಳ ಮನೋಸ್ಥೈರ್ಯ ಕುಸಿಯತೊಡಗಿತು. ಇದು ಸಹಜವೆ. ಪಾಕಿಸ್ತಾನದ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ನೋಡಿದ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾದರು.
ಯುದ್ಧದಲ್ಲಿ ಪೂರ್ವ ಪಾಕೀಸ್ತಾನವನ್ನು ಕಳೆದು ಕೊಂಡು ಅವಮಾನಿತರಾದ ಪಾಕಿಗಳು,ಈ ಯುಧ್ಧ ಕೈದಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಶುರುಮಾಡಿದರು. ರಾವಲ್ಪಿಂಡಿಯ ಜೈಲಿನಲ್ಲಿದ್ದ ಭಾರತೀಯ ವಾಯುಸೇನೆಯ ಪೈಲಟ್ ಗಳಲ್ಲಿ ಕೆಲವರು ಹತಾಶೆಯಿಂದ ಕೈಚೆಲ್ಲಿ ಕುಳಿತರೆ ಇನ್ನು ಕೆಲವರು ಒಂದು great escape ನ ನೀಲಿನಕಾಶೆ ತಯಾರು ಮಾಡಲು ಶುರುಹಚ್ಚಿಕೊಂಡರು.
ಫ್ಲೈಟ್ ಲೆಫ್ಟಿನೆಂಟ್ ಪರೂಲ್ಕರ್, M S ಗ್ರೇವಾಲ್ ಹಾಗು ಮೈಸೂರಿನವರಾದ ಹರೀಷ್ ಸಿನ್ಹಜಿ ಅಲ್ಲಿಂದ ಪರಾರಿಯಾಗುವ ಒಂದು ಅಧ್ಭುತ ಪ್ಲಾನನ್ನು ರಚಿಸಿದರು. ಅಲ್ಲಿಂದ ಹೊರಬಿದ್ದು ಪೇಷಾವರದ ಬಳಿಯ ರೈಲ್ವೆ ನಿಲ್ದಾಣ ತಲುಪಿದರೆ ಅಲ್ಲಿಂದ ಅಫ್ಘಾನಿಸ್ಥಾನವನ್ನು ತಲುಪಬಹುದು ಎನ್ನುವ ಯೋಜನೆಯೊಂದಿಗೆ ತಯಾರಿ ಶುರುವಾಯಿತು.
ಊಟದ ಜೊತೆಗೆ ಬರುತ್ತಿದ್ದ ಚಾಕು ಚಮಚಗಳು, ಕ್ಶೌರಿಕನಿಂದ ಕತ್ತರಿಗಳು, ಸ್ಕ್ರೂಡ್ರೈವರುಗಳನ್ನು ಉಪಯೋಗಿಸಿಕೊಂಡು ಹಿಂದಿನ ಗೋಡೆಯನ್ನು ಕೊರೆದು ಒಂದು ಅಂಗೈಯಗಲದ ತೂತಿನಿಂದ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಹತ್ತಿರವೇ ಒಂದು ಸಿನೆಮಾ ಥಿಯೇಟರ್ ಇತ್ತು ಮತ್ತು ಅದರ ಪಕ್ಕದಲ್ಲೇ ಒಂದು ಬಸ್ ನಿಲ್ದಾಣವೂ ಇತ್ತು. ರಾತ್ರಿಯ ಕೊನೆಯಪ್ರದರ್ಶನದ ನಂತರ ಒಂದು ಬಸ್ಸು ಅಲ್ಲಿಂದ ಹೊರಟು ಪೇಷಾವರಕ್ಕೆ ಹೋಗುವ ವಿಷಯನ್ನು ತಿಳಿದು ಕೊಂಡರು. ಇವರಿಗೆ ಸಿಕ್ಕ ಒಂದು ಹಳೆಯ ಮ್ಯಾಪಿನ ಪ್ರಕಾರ, ಆ ಟೌನಿನಿಂದ ಸ್ವಲ್ಪ ದೂರದಲ್ಲೇ ಒಂದು ರೈಲ್ವೆ ನಿಲ್ದಾಣವಿದೆ ಮತ್ತು ಅಲ್ಲಿಂದ ಆಫ್ಘಾನಿಸ್ತಾನದ ಗಡಿಗೆ ಕೆಲವೇ ಘಂಟೆಗಳ ಪ್ರಯಾಣ. ಒಮ್ಮೆ ಅಲ್ಲಿಗೆ ತಲುಪಿ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿದರೆ ಇನ್ನೇನು ನಮ್ಮ great escape ಯಶಸ್ವಿಯಾದ ಹಾಗೆ ಎನ್ನುವವರೆಗೂ ಎಲ್ಲಾ ಸಿದ್ದತೆಗಳು ನಡೆದವು. ವಿಮಾನದ ಪ್ಯಾರಾಚೂಟುಗಳನ್ನು ಬಳಸಿ ಅಂಗಿಗಳನ್ನು ಹೊಲೆದುಕೊಂಡರು. ಯುಧ್ಧಕೈದಿಗಳಿಗೆ ಸಿಗುತ್ತಿದ್ದ ಹಣವನ್ನು ಕಾವಲು ಕಾಯುತ್ತಿದ್ದ ಗಾರ್ಡುಗಳಿಗೆ ಕೊಟ್ಟು ಒಂದೆರಡು ಚೀಲಗಳನ್ನು ತರಿಸಿಕೊಂಡರು.
ಭಾರತದ ಪೈಲಟ್ಟುಗಳು ಮತ್ತು ಕೆಲವು ಪಾಕಿಸ್ತಾನಿ ಸೈನಿಕರು ಮತ್ತು ಮೇಜರ್ ಉಸ್ಮಾನ್ ಎನ್ನುವ ಅಧಿಕಾರಯೊಂದಿಗೆ ಸ್ನೇಹ ಬೆಳೆಯುತ್ತದೆ. ಇದಕ್ಕೆ Stockholm Syndrome ಎನ್ನುತ್ತಾರೆ. ವಿಮಾನ ಅಪಹರಣಕಾರರು.. ಅಪಹೃತರೊಂದಿಗೆ ದೋಸ್ತಿ ಬೆಳಸುವಂತೆ. ಕ್ರಮೇಣ ಆ ಅಂಗೈಯಗಲದ ಕಿಂಡಿಯನ್ನು ಇಟ್ಟಿಗೆಗಳ ಮಧ್ಯದ ಕಾಂಕ್ರೀಟು ಕೆರೆದು ಕೆರೆದು ಅಗಲ ಮಾಡುತ್ತಾ ಹೋದರು. ರಾತ್ರಿಯೆಲ್ಲಾ ಈ ಕೆಲಸ ನಡೆಯುತ್ತಿತ್ತು ಮತ್ತು ಬೆಳಗಾಗುವ ಮುನ್ನ ಯಾರಿಗೂ ಅನುಮಾನ ಬರದಂತೆ ಇಟ್ಟಿಗೆಗಳನ್ನು ಜೋಡಿಸಿಟ್ಟು ಬಿಡುತ್ತಿದ್ದರು. ಕೆಲವೇ ದಿನಗಳಲ್ಲಿ ಇದು ಒಬ್ಬಬ್ಬರಾಗಿ ನುಸುಳಿಕೊಂಡು ಹೊರಬರುವಷ್ಟು ಅಗಲವಾಯಿತು.
ಆಗಸ್ಟ್ 12 ರ ರಾತ್ರಿ great escape ನ ಕಾರ್ಯಾಚರಣೆ ಶುರು. ಈ ಪ್ಲಾನನ್ನು ಎಷ್ಟು ಕರಾರುವಕ್ಕಾಗಿ ಮಾಡಿದ್ದರೆಂದರೆ, ಕತ್ತಲಿನಲ್ಲಿ, ಇನ್ನೇನು ಸಿನೆಮಾ ಮುಗಿದು ಜನರ ಗುಂಪು ಹೊರ ಬರುತ್ತಿದ್ದ ಹಾಗೆ ಈ ಮೂವರು ನುಸುಳಿಕೊಂಡು ಬಂದರು. ಅದೇ ಸಮಯಕ್ಕೆ ಮಳೆಯೂ ಶುರುವಾದ್ದರಿಂದ ಇವರು ನುಸುಳಿಕೊಂಡು ಹೊರ ಬಂದದ್ದು ಯಾರಿಗೂ ಕಾಣಲಿಲ್ಲ. ಸದ್ಯ ದೇವರು ನಮ್ಮೊಂದಿಗಿದ್ದಾನೆ ಎನಿಸಿತಂತೆ. ಥಿಯೇಟರಿನಿಂದ ಹೊರಬಂದ ಗುಂಪು ಸೀದಾ ಬಸ್ಸಿನಲ್ಲಿ ತುಂಬಿಕೊಂಡು ಬಿಟ್ಟಿತು. ಇವರೂ ಗುಂಪಿನಲ್ಲಿ ಗೋವಿಂದರಾದರು. ಪಂಜಾಬಿನವರಾದ ಗ್ರೇವಾಲ್ ಪಠಾಣರ ಮಾದರಿಯಲ್ಲಿ ಮಾತನಾಡುತ್ತ ಯಾರಿಗೂ ಅನುಮಾನ ಬರದ ಹಾಗೆ ನೋಡಿಕೊಂಡರು. ಮೈಸೂರಿನ ಹರೀಶರಿಗೆ ‘ಹರಾಲ್ಡ್’ ಎಂದು ನಾಮಕರಣ ಮಾಡಿ ಅವರ ಎಡವಟ್ಟು ಹಿಂದಿಯ ಸುಳಿವು ಸಿಗದ ಹಾಗೆ ನೋಡಿಕೊಂಡರು!
ಬೆಳಗಿನ ಜಾವದಷ್ಟು ಹೊತ್ತಿಗೆ ಬಸ್ಸು ಪೇಷಾವರಕ್ಕೆ ಬಂದು ತಲುಪಿತು. ರಾತ್ರಿಯೀಡೀ ಬಸ್ಸಿನಲ್ಲಿ ತೂಕಡಿಸುತ್ತಾ ಹರೀಷ್ ತಮ್ಮ ಮೈಸೂರಿನ ನಜರಾಬಾದ ಮನೆಯಲ್ಲಿ, ತಂದೆ ತಾಯಿಯರ ಜೊತೆ ಊಟ ಮಾಡುವ ಕನಸು ಕಾಣುತ್ತಿದ್ದರಂತೆ. ಇವರ ಕೈಲಿದ್ದ ಮ್ಯಾಪಿನ ಪ್ರಕಾರ ‘ಲಂಡಿ ಖಾನ’ ಎನ್ನುವ ರೈಲು ನಿಲ್ದಾಣ ಮೂರು ಕಿಮೀ ದೂರ. ಅಲ್ಲೇ ಹತ್ತಿರದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಾ, ನಾವು ಪಾಕಿಸ್ತಾನದ ವಾಯುಸೈನಿಕರು ರಜೆಯಲ್ಲಿದ್ದೇವೆ ಪ್ರವಾಸ ಮಾಡುತ್ತಿದ್ದೇವೆ ಎಂದು ಯಾರಿಗೂ ಅನುಮಾನ ಬರದ ಹಾಗೆ ಮಾತಾಡಿದರು. ಇನ್ನೂ ಯುಧ್ಧದ ನೆನಪು ಮಾಸಿರಲಿಲ್ಲ,ಅಪನಂಬಿಕೆಯ ವಾತಾವರಣ ಆದರೂ.. ಇರಬಹುದೇನೋ ಎಂದು ಅವರ ಪಾಡಿಗೆ ಹೋಗುತ್ತಿದ್ದರೇನೋ…ಆದರೆ ಇವರಿಂದ ಒಂದು ದೊಡ್ಡ ಪ್ರಮಾದ ನಡೆದು ಹೋಯಿತು. ಅದರಿಂದಾಗಿ ಮೂವರೂ ಪುನಃ ರಾವಲ್ಪಿಂಡಿಯ ಕಾರಾಗೃಹಕ್ಕೆ ವಾಪಸಾಗುವ ಪರಿಸ್ಥಿತಿ ನಿರ್ಮಾಣವಾಯಿತು.!
ಅದೇನಾಯಿತೆಂದರೆ..ಇವರಿಗೆ ಜೈಲಿನಲ್ಲಿ ದೊರೆತ ಭೂಪಟ ಬಹಳ ಹಳೆಯದು. ಅದರಲ್ಲಿದ್ದ ಲಂಡೀ ಖಾನ ಎನ್ನುವ ರೈಲು ನಿಲ್ದಾಣ ಮುಚ್ಚಿ ಬಹಳ ವರ್ಷಗಳೇ ಆಗಿದ್ದವು. ಇವರು ಲಂಡೀ ಖಾನಕ್ಕೆ ಹೋಗಬೇಕು ಎಂದು ಟಾಂಗಾದವರನ್ನು ಕೇಳಿದಾಗ, ಟಾಂಗಾದವರು ಮುಖ ಮುಖ ನೋಡಿಕೊಳ್ಳುತ್ತಾರೆ, ಯಾಕೆಂದರೆ ಅವರು ಆ ಹೆಸರನ್ನೇ ಕೇಳಿರಲಿಲ್ಲ. ಅಲ್ಲೇ ಇದ್ದ ತಹಸೀಲ್ದಾರ್ ಕಛೇರಿಯ ಗುಮಾಸ್ತನೊಬ್ಬ ಅನುಮಾನ ಪಟ್ಟು ಇವರನ್ನು ವಿಚಾರಣೆ ಮಾಡುತ್ತಾನೆ ಮತ್ತು ತಹಸೀಲ್ದಾರರಿಗೆ ವಿಷಯ ತಿಳಿಸುತ್ತಾನೆ. ತಹಸೀಲ್ದಾರರು ಸ್ಥಳಕ್ಕೆ ಬಂದು ವಿಚಾರಣೆ ಮುಂದುವರೆಸುತ್ತಾರೆ. ಪರೋಲ್ಕರರಿಗೆ ಪರಿಸ್ಥಿತಿಯ ಅರಿವಾಗುತ್ತದೆ ಇನ್ನು ತಡಮಾಡಿದರೆ ಆಗಲೇ ಜಮಾಯಿಸಿರುವ ದೈತ್ಯ ಪಠಾಣರಿಂದ ಅಪಾಯ ತಪ್ಪಿದ್ದಲ್ಲಾ ಎಂದು ಮನವರಿಕೆಯಾಗಿ ಜೈಲಿನ ಅಧಿಕಾರಿಯಾಗಿದ್ದ ಉಸ್ಮಾನರ ಬಳಿ ಮಾತಾಡಬೇಕೆಂದು ಕೋರುತ್ತಾರೆ. ಮೊದಲು ಅದಕ್ಕೆ ಒಪ್ಪದ ತಹಸೀಲ್ದಾರನನ್ನು ಅಂತೂ ಕೊನೆಗೆ ಒಪ್ಪಿಸಿ ಉಸ್ಮಾನ್ ಅವರೊಂದಿಗೆ ಮಾತನಾಡುತ್ತಾರೆ. ಕೂಡಲೇ ಪರಿಸ್ಥಿತಿಯನ್ನು ಗ್ರಹಿಸಿದ ಉಸ್ಮಾನ್ ತಹಸೀಲ್ದಾರರೊಂದಿಗೆ ಮಾತಾಡಿ, ಇವರು ನಮ್ಮವರೇ…ಇವರನ್ನು ಸುರಕ್ಷಿತವಾಗಿ ರಾವಲ್ಪಿಂಡಿಗೆ ಕಳುಹಿಸಿ ಕೊಡಿ ಎಂದು ಆದೇಶಿಸುತ್ತಾರೆ.
ಅಂತಯೇ ಮೂವರೂ ರಾವಲ್ಪಿಂಡಿಯ ಜೈಲಿಗೆ ಮರಳುತ್ತಾರೆ.
ಜೈಲಿನ ಸಿಬ್ಬಂದಿ ಮೇಲೆ ಮೇಲೆ ಸಿಟ್ಟು ತೋರಿಸಿದರೂ ಸಹ ಗುಟ್ಟಾಗಿ ಬಂದು ಹೇಳುತ್ತಾರೆ….
” ನಮ್ಮ ಪಾಕಿಸ್ತಾನದ ಪೈಲಟ್ಟುಗಳು ನಿಮ್ಮ ಹಾಗೆ ಸಾಹಸಿಗಳಾಗಿದ್ದಿದ್ದರೆ ನಮ್ಮ ವಾಯುಸೇನೆಯ ಚರ್ಯವೇ ಬೇರಿರುತ್ತಿತ್ತು”
ಮರಳಿ ಬಾನಿಗೆ
1 ಡಿಸೆಂಬರ್ 1972, ಜು಼ಲ್ಫೀಕರ್ ಆಲಿ ಭುಟ್ಟೊ ಪಾಕಿಸ್ತಾನದ ಅಂದಿನ ಪ್ರಧಾನಿ ರಾವಲ್ಪಿಂಡಿಯಲ್ಲಿ ಭಾರತೀಯ ವಾಯುಸೇನೆಯ ಪೈಲಟ್ ಗಳೂ ಸೇರಿದಂತೆ ಇತರೆ ಯುಧ್ಧ ಕೈದಿಗಳನ್ನುದ್ದೇಶಿಸಿ ‘ನೀವಿನ್ನು ಸ್ವತಂತ್ರರು’ ಎಂದು ಘೋಷಿಸುತ್ತಾರೆ! ಅಮೃತಸರದ ಹತ್ತಿರದ ವಾಘಾ ಬಾರ್ಡರಿನಲ್ಲಿ ಇವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅಮೃತಸರದ ವಾಯುನೆಲೆಯಲ್ಲಿ ಇವರ ಕುಟುಂಬದ ಸದಸ್ಯರುಗಳನ್ನೆಲ್ಲಾ ಮೊದಲೇ ಕರೆಸಿಟ್ಟುಕೊಂಡಿದ್ದರು. ಯುಧ್ಧ ಶುರುವಾದ ಬರೊಬ್ಬರಿ ಒಂದು ವರ್ಷದ ನಂತರ ಇವರ ಸಮಾಗಮ. ಆ ಒಂದು ಭಾವನೆಗಳ ಸಮ್ಮಿಳನ ಅದನ್ನು ಅನುಭವಿಸಿದವರಿಗೇ ಗೊತ್ತು. ನಾವೆಲ್ಲಾ ಪ್ರೇಕ್ಷಕಗಣ.
ವಿಂಗ್ ಕಮಾಂಡರ್ ಗ್ರೇವಾಲ್,ಬಾನಿಗೆ ಮರಳಿದರಾದರೂ, ಕೆಲ ವರ್ಷಗಳ ನಂತರ ವಾಯುಪಡೆಗೆ ರಾಜೀನಾಮೆ ಕೊಟ್ಟು, ಹಿಮಾಲಯದ ತಪ್ಪಲಿನ ‘ತೆರಾಯ್’ ಪ್ರದೇಶದಲ್ಲಿ ಈಗಲೂ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಈ Great Escape ನ ಮುಖಂಡ ಗ್ರೂಪ್ ಕ್ಯಾಪ್ಟನ್ ದಿಲಿಪ್ ಪರೂಲ್ಕರ್ ಪೂನಾದಲ್ಲಿ ವಿವಿಧ ಉದ್ಯೊಗಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಗ್ರೂಪ್ ಕ್ಯಾಪ್ಟನ್ ಹರೀಶ್ ಬೆಂಗಳೂರಿನಲ್ಲಿ ಸೆಟ್ಲಾದರು. ಆದರೆ ದುರದೃಷ್ಟವಶಾತ್ 1999 ರಲ್ಲಿ ಅನಾರೋಗ್ಯದಿಂದ ಬಳಲಿ ಮೃತರಾದರು. ಅವರ ಮಗ ವಿಕ್ರಮ್, ನರನರಗಳಲ್ಲೂ ಅವರ ಅಪ್ಪನ ನೆನಪುಗಳನ್ನೇ ತುಂಬಿಕೊಂಡು ಜೀವಿಸಿತ್ತಿರುವ ವ್ಯಕ್ತಿ, ಏರ್ಲೈನ್ ನಲ್ಲಿ ಪೈಲಟ್ ಆಗಿದ್ದಾರೆ.
ಇವರ ಈ ಸಾಹಸಗಾಥೆ The Great Escape ಎನ್ನುವ ಚಲನಚಿತ್ರವಾಗಿ ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಲಿದೆ ಎನ್ನುವ ವಿಷಯ ತಿಳಿದು ಬಂದಿದೆ. ಅಂತೂ ಯುದ್ಧದ ಒಂದು ವರ್ಷದ ನಂತರ ನಮ್ಮ ಭಾರತೀಯ ಸೈನಿಕರು ಬಿಡುಗಡೆ ಹೊಂದಿದರು. ಆದರೆ ಒಂದು ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕು…
93,000 ಪಾಕೀಸ್ತಾನಿ ಯುಧ್ಧಕೈದಿಗಳಿಗೆ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ದೊರೆಯುತ್ತದೆ ಆದರೆ ನಮ್ಮ ಸೈನಿಕರು ಒಂದು ವರ್ಷ ಕಾಯಬೇಕಾಗಿ ಬಂತು..
ಒಂದೇ ಏಟಿಗೆ ಕಾಶ್ಮೀರದ ಸಮಸ್ಯೆಯನ್ನು ಪರಿಹಾರ ಮಾಡುವ ಅವಕಾಶ ಬಂದಿದ್ದನ್ನು ಚೆಲ್ಲಿ ಕುಳಿತೆವೇ
ಯಾಕೆ ಹೀಗೇ? ಯಾರು ಇದಕ್ಕೆ ಹೊಣೆ?
….ವಿಂಗ್ ಕಮಾಂಡರ್ ಸುದರ್ಶನ