ಬೆಳಗಾವಿ : ಕಾಸರಗೋಡು ಜಿಲ್ಲೆಯ ಪಾಣತ್ತೂರು ಮಂಜತ್ತಡ್ಕ ನದಿಯಲ್ಲಿ ಬೈಕ್ ಸಹಿತ ನೀರುಪಾಲಾಗಿದ್ದ ಬೆಳಗಾವಿ ಮೂಲದ ಕಾರ್ಮಿಕನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಬೆಳಗಾವಿಯ ದುರ್ಗಪ್ಪ (18) ಮೃತ ದುರ್ದೈವಿ.
ಇಂದು ಬೆಳಗ್ಗೆ ಶೋಧ ನಡೆಸಿದಾಗ ಘಟನೆ ನಡೆದ ಸ್ಥಳದಿಂದ ಅಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಭಾರೀ ಮಳೆಗೆ ನೀರಿನ ಸೆಳೆತ ಹೆಚ್ಚಿರುವುದರಿಂದ ಎರಡು ದಿನಗಳಿಂದ ಶೋಧಕ್ಕೆ ಅಡ್ಡಿಯಾಗಿತ್ತು. ಜುಲೈ 17 ರಂದು ಮಧ್ಯಾಹ್ನದಿಂದ ಈತ ನಾಪತ್ತೆಯಾಗಿದ್ದ. ಈತ ಆಹಾರ ತರಲು ಬೈಕ್ ನಲ್ಲಿ ತೆರಳುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ. ರಾಜಪುರ ತೋಟಗಾರಿಕಾ ನಿಗಮದ ಅನಾನಸು ಕೃಷಿ ಕೇಂದ್ರದಲ್ಲಿ ಜೆಸಿಬಿ ಚಾಲಕನ ಸಹಾಯಕನಾಗಿ ಮೃತ ದುರ್ಗಪ್ಪ ಕೆಲಸ ನಿರ್ವಹಿಸುತ್ತಿದ್ದ.
ಬೈಕ್ ಸಹಿತ ನಾಪತ್ತೆಯಾದುದರಿಂದ ನದಿ ಪಾಲಾಗಿರಬಹುದು ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಮಾಲಕ ರಾಜಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ನಾಗರಿಕರು ಘಟನಾ ಸ್ಥಳದಲ್ಲಿ ಶೋಧ ನಡೆಸಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.