(ಬೆಳಗಾವಿಯ ಗೃಹ ಮಂಡಳಿ ಅಧಿಕಾರಿಯ ಅಂದಾ ದರ್ಬಾರ್ ಇದು.ಗೃಹ ಮಂಡಳಿ ಬೆಳಗಾವಿ ಅಧಿಕಾರಿ ಈಗ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಬೆಳಗಾವಿ ಮಾತ್ರವಲ್ಲ. ಉತ್ತರ ಕನ್ನಡದಲ್ಲೂ ಗೃಹ ಮಂಡಳಿಯಿಂದ ಜನ ಬೇಸತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನ ಸಾಕಷ್ಟು ಸಾಲ ಮಾಡಿ ಗೃಹ ಮಂಡಳಿಗೆ ಹಣ ನೀಡಿದ್ದರೂ ಮಂಡಳಿ ಮಾತ್ರ ಇದುವರೆಗೆ ಮನೆ ಕಟ್ಟಿ ಕೊಡದೆ ಇರುವುದು ದುರಂತದ ಸಂಗತಿ. ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಇದರಲ್ಲಿ ಜನರನ್ನು ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಾರೆ ಹಣ ನುಂಗುವಲ್ಲಿ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಶಾಮೀಲಾಗಿದ್ದಾರೆ.)
ಬೆಳಗಾವಿ: ಜನರಿಗೆ ತಲೆಯ ಮೇಲೊಂದು ಸೂರು ಕಟ್ಟಿಕೊಡುವ ಮಹತ್ವದ ಹೊಣೆ ಹೊತ್ತಿರುವ ಕರ್ನಾಟಕ ಗೃಹ ಮಂಡಳಿ ಇದೀಗ ಜನರಿಗೆ ಮನೆ ಕಟ್ಟಿಕೊಡುವ ಬದಲು ಚೊಂಬು ಕೊಡುವ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ. ಈ ಮೂಲಕ ಗೃಹ ಮಂಡಳಿ ಜನರಿಗೆ ಬಹುದೊಡ್ಡ ಪ್ರಮಾಣದಲ್ಲಿ ದೋಖಾ ನೀಡುತ್ತಿದೆ.
ಕರ್ನಾಟಕ ಗೃಹ ಮಂಡಳಿಯ ಕರ್ಮಕಾಂಡಗಳು ಅದರ ಒಳಹೊಕ್ಕು ನೋಡಿದಾಗ ಒಂದೊಂದೇ ಬಿಚ್ಚಿಕೊಳ್ಳುತ್ತಿವೆ. ಜನರಿಗೆ ಯೋಗ್ಯ ದರದಲ್ಲಿ ಸುಲಭ ಸಾಧ್ಯವಾಗಿ ಮನೆಯನ್ನು ಕಟ್ಟಿ ಕೊಡುತ್ತೇವೆ ಎಂದು ಹೇಳುವ ಮಂಡಳಿ ನಂತರ ಜಾಣಮರೆವು ನೀತಿ ಅನುಸರಿಸುತ್ತಿದೆ. ಇದರಿಂದ ಜನ ಈಗ ಜಾಗೃತಗೊಂಡಿದ್ದು ಯಾವ ಕ್ಷಣದಲ್ಲಿ ಸಿಡಿದೇಳುತ್ತಾರೋ ಗೊತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಿಮಗೆ ಸುಂದರ ಮನೆ ಕಟ್ಟಿಕೊಡುತ್ತೇವೆ, ಹಣವನ್ನು ತುಂಬಿರಿ ಎಂದು ಹೇಳುವ ಕರ್ನಾಟಕ ಗೃಹ ಮಂಡಳಿ ಇದೀಗ ಅತ್ತ ಮನೆಯನ್ನು ಕೊಡದೆ ಇತ್ತ ಡಿಪೋಸಿಟ್ ಹಣವನ್ನು ನೀಡದೆ ಸತಾಯಿಸುತ್ತಿದೆ. ಈ ಮೂಲಕ ಭರ್ಜರಿಯಾಗಿ ಜನರಿಗೆ ಸರ್ಕಾರದ ಮಂಡಳಿಯೊಂದು ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದೆ.
ವರ್ಷವಿಡಿ ದುಡಿದ ಕಾರ್ಮಿಕರು ತಮ್ಮ ತಲೆಯ ಮೇಲೊಂದು ಸೂರು ಇಲ್ಲ ಎಂಬ ಕಾರಣಕ್ಕೆ ಸಾಲ ಸೋಲ ಮಾಡಿ ಗೃಹ ಮಂಡಳಿಗೆ ನೀಡಿದ್ದ ಹಣ ಎತ್ತ ಹೋಗಿದೆಯೋ ದೇವರೇ ಬಲ್ಲ.
ಇತ್ತ ಮನೆಯೂ ಇಲ್ಲ ಅತ್ತ ಕಟ್ಟಿದ ಹಣವೂ ಇಲ್ಲ ಎಂಬಂತಾಗಿ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ದಯನೀಯ ಸ್ಥಿತಿ ಸೃಷ್ಟಿಯಾಗಿದೆ. ಮನೆ ಪಡೆಯುವ ಹಂಬಲವುಳ್ಳ ನಿರ್ಗತಿಕರು ಈಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿದೆ. ಗೃಹ ಮಂಡಳಿ ಮನೆ ನಿವೇಶನಕ್ಕೆ ಅರ್ಜಿ ಪಡೆಯುತ್ತದೆ. ಆದರೆ, ಸರಿಯಾದ ಸಮಯಕ್ಕೆ ನಿವೇಶನ ಕೊಡುವುದೇ ಇಲ್ಲ ಎಂಬ ದೂರು ವ್ಯಾಪಕ ಪ್ರಮಾಣದಲ್ಲಿ ಕೇಳಿ ಬಂದಿದೆ.
ಇನ್ನೊಂದೆಡೆ ಜನರಿಗೆ ನಿವೇಶನ ನೀಡಲು ಅಗತ್ಯವಾಗಿರುವ ಜಾಗವನ್ನು ರೈತರಿಂದ ವಶಪಡಿಸಿಕೊಳ್ಳುತ್ತಿದೆ. ಆದರೆ ಆ ಜಾಗ ಮತ್ತೆ ಅತಿಕ್ರಮಣವಾದರೂ ಗೃಹ ಮಂಡಳಿ ಮಾತ್ರ ಎಚ್ಚೆತ್ತುಕೊಳ್ಳುವುದಿಲ್ಲ. ಜನ 50,000 ದಿಂದ 75,000 ರೂ. ಗೃಹ ಮಂಡಳಿಗೆ ತೆತ್ತು ದಶಕ ಕಳೆದರೂ ಮನೆ ಮಾತ್ರ ಇಲ್ಲ. ಅತ್ತ ಕೇಂದ್ರ ಮತ್ತು ರಾಜ್ಯ ಸರಕಾರಗಳು ಫಂಡ್ ನೀಡಿದರೂ ಇದ್ಯಾವುದೂ ತನಗೆ ಸಂಬಂಧವೇ ಇಲ್ಲ ಎನ್ನುವಂತೆ ಗೃಹ ಮಂಡಳಿ ನಡೆದುಕೊಳ್ಳುತ್ತಿದೆ.
ಒಟ್ಟಾರೆ ಜನ ರೊಚ್ಚಿಗೇಳುವ ಮೊದಲು ಗೃಹ ಮಂಡಳಿ ಎಚ್ಚೆತ್ತುಕೊಳ್ಳುವುದು ಒಳಿತು.