ಬೆಳಗಾವಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಏಕಾಏಕಿ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ ಥಳಾಟ ಕೂಡ ನಡೆಯಿತು. ಬಳಿಕ 30ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮೊದಲು ನಗರದ ಚೆನ್ನಮ್ಮ ವೃತ್ತದಲ್ಲಿ ಎಮ್ಮೆಗಳನ್ನು ರಸ್ತೆಗೆ ತಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ೧೦ ತಿಂಗಳಲ್ಲಿ ೭೧೬ ಕೋಟಿ ರೂ ಬಾಕಿ ಉಳಿಸಿಕೊಂಡಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೂ ಸಹ ರಾಜ್ಯ ಕತ್ತರಿ ಹಾಕಿದೆ.ರಾಜ್ಯ ಸರ್ಕಾರ ಕೊಡಮಾಡ್ತಿದ್ದ 04ಸಾವಿರ ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕಿದೆ.ಜಮೀನು ವಹಿವಾಟಿನ ಮೇಲೆ ದುಪ್ಪಟ್ಟು ಮುಂದ್ರಾಂಕ ಶುಲ್ಕ ವಿಧಿಸಿದೆ ಎಂದು ಆರೋಪಿಸಿದೆ.ತಡೆ ಹಿಡಿದಿರುವ ೪ ಸಾವಿರ ರೂ ಪ್ರೋತ್ಸಾಹ ಧನ ಶೀಘ್ರವೇ ಬಿಡುಗಡೆ ಮಾಡಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಜಾನುವಾರು ಸಮೇತ ಪ್ರತಿಭಟನೆ ಮಾಡ್ತಿವಿ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.