ಬೆಳಗಾವಿ :
ರಾಜ್ಯ ಸರ್ಕಾರ ಪ್ರತಿ ವರ್ಷ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನವನ್ನು ಇಲ್ಲಿಯ ಸುವರ್ಣ ವಿಧಾನಸೌಧದಲ್ಲಿ ನಡೆಸುತ್ತಿದೆ.
ಆದರೆ, ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳು ಹೆಚ್ಚು ಸುದ್ದಿಯಾಗುತ್ತಿವೆ. ಈ ಬಾರಿ ಪ್ರತಿಭಟನೆಗಳಿಗೆ ಬ್ರೇಕ್ ಹಾಕುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.
ಡಿ.4ರಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಶೇಷ ಅಧಿವೇಶನ ಪ್ರಾರಂಭವಾಗಲಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಪ್ರತಿ ಬಾರಿ ಪ್ರತಿಭಟನೆಗಳೇ ಆಗುತ್ತವೆ ಎಂದು ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರೆ. ಈ ಅಧಿವೇಶನ ಪ್ರತಿಭಟನೆಗಳ ಅಧಿವೇಶನವೆಂದು ತಿಳಿದುಕೊಂಡಿದ್ದಾರೆ. ಆ ತರಹ ಆಗಬಾರದು ಎಂದು ತಿಳಿಸಿದ್ದಾರೆ. ರೈತರೊಂದಿಗೆ ಸಚಿವರು ಸಭೆ ನಡೆಸಬೇಕೆಂದು ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಅಧಿವೇಶನದ ವೇಳೆ ಪ್ರತಿಭಟನೆಗಳನ್ನು ನಡೆಸದಂತೆ ಸಂಘಟನೆಗಳ ಮನವೊಲಿಸಲು ಕೋರಿ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಸ್ವತಃ ಕಳಕಳಿ ತೋರಿಸಿದ್ದಾರೆ.
ಬೆಳಗಾವಿ ಅಧಿವೇಶನ ಘೋಷಣೆಯಾಗುತ್ತಿದ್ದಂತೆ ಅಧಿವೇಶನದಿಂದ ಆರಂಭವಾಗಿ ಕೊನೆಯ ದಿನದವರೆಗೂ ಪ್ರತಿಭಟನೆಗಳ ಸುದ್ದಿಯೇ ಜಾಸ್ತಿ ಪ್ರಚಾರ ಮಾಡುತ್ತಿದೆ. ಅಧಿವೇಶನ ಸಂದರ್ಭದಲ್ಲಿ ಹತ್ತು ಹಲವು ಸಂಘಟನೆಗಳು ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇದಕ್ಕೆ ಬ್ರೇಕ್ ಹಾಕುವಂತೆ ಬಸವರಾಜ ಹೊರಟ್ಟಿ ಈ ಬಾರಿ ಮುಂಚಿತವಾಗಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಬೆಳಗಾವಿ ಅಧಿವೇಶನ ಎಂದರೆ ಪ್ರಮುಖವಾಗಿ ಉತ್ತರ ಕರ್ನಾಟಕದ ಜಲಂತ ಸಮಸ್ಯೆಗಳು ಬಗೆಹರಿಯಬೇಕು. ಆದರೆ ನೈಜ ಸಮಸ್ಯೆಗಳ ಅನಾವರಣ ಆಗದೆ ಪ್ರತಿಭಟನೆಗಳ ಸುದ್ದಿಯೇ ಸದ್ದು ಮಾಡುತ್ತಿದೆ. ಹೀಗಾಗಿ ಬಸವರಾಜ ಹೊರಟ್ಟಿ ಅವರು ಸರಕಾರಕ್ಕೆ ತಮ್ಮ ಅಮೂಲ್ಯ ಸಲಹೆಯನ್ನು ರವಾನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರಿಗೆ ಸಲಹಾ ಪತ್ರ ಬರೆದಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
ಅಧಿವೇಶನದ ಅತ್ಯಮೂಲ್ಯವಾದ ಸಮಯ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಂದ ವ್ಯರ್ಥವಾಗುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನ ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸಲಹೆ ನೀಡಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಕೃಷಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವಾರು ಸಂಘಟನೆಗಳು ಧರಣಿ, ಸತ್ಯಾಗ್ರಹ ನಡೆಸುವುದು ಸಾಮಾನ್ಯವಾಗಿದೆ. ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಬೇಕು. ಬಳಿಕ ಅವುಗಳ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಸಂಘಟನೆಗಳು ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಸಂಘಟನೆಗಳ ಮುಖಂಡರಲ್ಲಿ ಮನವಿ ಮಾಡಲು ಮುಖ್ಯಮಂತ್ರಿ ತಮ್ಮ ಸಚಿವ ಸಂಪುಟದ ಸಂಬಂಧಪಟ್ಟ ಸಚಿವರಿಗೆ ಸೂಚಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೊರಟ್ಟಿ ಕೋರಿದ್ದಾರೆ.
ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾದರೆ ಸದನದ ಒಳಗಡೆ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆಸಲು ಸಾಧ್ಯ. ಅಲ್ಲದೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿದ್ದು, ಸಾರ್ಥಕವಾಗಿ ಸರ್ಕಾರಕ್ಕೆ ಗೌರವ, ಒಳ್ಳೆಯ ಹೆಸರು ಬರುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.