ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಬೆಳಗಾವಿ ತಾಲೂಕು ಸಂತಿಬಸ್ತವಾಡ ಗ್ರಾಮದ ಶಾಂತಿಗಲ್ಲಿಯ ನಾಗರಾಜ ಹೊಳೆಪ್ಪ ರಂಗಿ (23) ಶಿಕ್ಷಗೊಳಗಾದ ಆರೋಪಿ. ಬಾಲಕಿ ಎಂದು ಗೊತ್ತಿದ್ದರೂ 20.12.2022 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಆತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಒತ್ತಾಯದಿಂದ ಅತ್ಯಾಚಾರ ಎಸೆಗಿದ್ದಾನೆ. ನಂತರದ ದಿನಗಳಲ್ಲಿ 2-3 ಸಲ ಲೈಂಗಿಕ ಕೃತ್ಯ ನಡೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ.
ನಂತರ 2023 ರ ಏಪ್ರಿಲ್ 27 ರಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾನೆ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎಲ್ಲಾ ಅಪರಾಧಕ್ಕಾಗಿ ದಾಖಲಾಧಿಕಾರಿ ಚನ್ನಯ್ಯ ದೇವೂರ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಮಂಜುನಾಥ ಜಿ. ಹಿರೇಮಠ ಪ್ರಕರಣವನ್ನು ದಾಖಲಿಸಿ ನಂತರ ತನಿಖೆಯನ್ನು ಕೈಗೊಂಡು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ಶೀಘ್ರಗತಿ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಸಿಎಂ ಪುಷ್ಪಲತಾ ಪ್ರಕರಣದ ವಿಚಾರಣೆ ಮಾಡಿ 13 ಸಾಕ್ಷಿಗಳ ವಿಚಾರಣೆ, 56 ದಾಖಲೆ ಮತ್ತು 8 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ನಾಗರಾಜನ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನಾಲ್ಕು ಲಕ್ಷ ರೂಪಾಯಿ ಪರಿಹಾರ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡಲು ಸಹ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಹಾಜರಾಗಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


