ಬೆಳಗಾವಿ: ಮಹತ್ವದ ಬೆಳವಣಿಗೆ ಒಂದರಲ್ಲಿ ಬೆಳಗಾವಿಯ ನ್ಯಾಯಾಲಯ ಇಂದು ಮತ್ತೊಂದು ಮಹತ್ವದ ತೀರ್ಪು ಹೊರಡಿಸಿದೆ. ಮೂಕಿ ಎಂದು ಗೊತ್ತಿದ್ದರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಘೋರ ಶಿಕ್ಷೆ ವಿಧಿಸಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಗೋಕಾಕ ತಾಲೂಕು ಕೌಜಲಗಿ ಗ್ರಾಮದ ವೀರಪ್ಪ ಮುತ್ತಪ್ಪ ದಾನನ್ನವರ(30)ಶಿಕ್ಷೆಗೊಳಗಾದ ಆರೋಪಿ. ನೊಂದ ಬಾಲಕಿ ಹುಟ್ಟು ಮೂಕಿಯಾಗಿದ್ದು ಮಾನಸಿಕ ದುರ್ಬಲ ಎಂದು ಗೊತ್ತಿದ್ದರೂ 2023 ರ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 4:00 ಗಂಟೆ ಸುಮಾರಿಗೆ ಆತ ಬಾಲಕಿಯ ಮನೆಯ ಒಳಗೆ ಹೋಗಿ ಬಾಗಿಲು ಮುಚ್ಚಿ ಒತ್ತಾಯಪೂರ್ವಕವಾಗಿ ಲೈಂಗಿಕ ಅತ್ಯಾಚಾರ ಎಸಗಿದ್ದ. ಈ ಘಟನೆ ಬಗ್ಗೆ ಸನ್ನೆ ಮಾಡಿ ಹಾವಭಾವ ಮೂಲಕ ಆರೋಪಿತನು ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಬಾಲಕಿ ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿ ಕುಲಗೋಡ ಎಸ್ಐ ಜಿ.ಎಸ್.ಪಾಟೀಲ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-1 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 8 ಸಾಕ್ಷಿಗಳ ವಿಚಾರಣೆ, 44 ದಾಖಲೆ ಮತ್ತು 14 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ಈರಪ್ಪ ದಾನನ್ನವರ ಮೇಲಿನ ಆರೋಪ ಸಾಬೀತಾಗಿವೆ ಎಂದು ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರುಪಾಯಿ ನಾಲ್ಕು ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳವರೆಗೆ ಠೇವಣಿ ಇಡಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಹಾಜರಾಗಿ ಪ್ರಕರಣ ಮಂಡಿಸಿದ್ದರು.


