ಬೆಳಗಾವಿ: ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸುಳ್ಳು ದೂರು ಕೊಟ್ಟಿದ್ದಕ್ಕೆ ದೂರುದಾರೆ ಸೇರಿ 13 ಮಂದಿ ಜೈಲು ಪಾಲಾಗಿದ್ದಾರೆ. ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಡಿಸಿದೆ. ಅತ್ಯಾಚಾರದ ದೂರುದಾರೆ ಬಿ.ವಿ ಸಿಂಧೂ ಸೇರಿ 13 ಜನರಿಗೆ 3 ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ 13 ಆರೋಪಿಗಳಿಗೂ ತಲಾ 86 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.
ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಗಿ ವಿರುದ್ಧ ಬಿ.ವಿ ಸಿಂಧೂ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. 2014 ನವೆಂಬರ್ 19ರಂದು ಮಾಳಮಾರುತಿ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿತ್ತು.
ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಾಳಮಾರುತಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆಯಲ್ಲಿ ಅತ್ಯಾಚಾರ, ಜೀವಬೆದರಿಕೆ ಹಾಕಿದ್ದು ಸುಳ್ಳು ಎಂದು ಬಯಲಾಗಿತ್ತು. ಆ ನಂತರ ಇತರೆ ಆರೋಪಗಳಿಂದ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ದೂರುದಾರೆ ಸಿಂಧೂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಳು. ಆದರೆ 2017ರಲ್ಲಿ ದೂರುದಾರೆ ಸಿಂಧೂ ಸೇರಿ 13 ಮಂದಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳ ಸಂಗ್ರಹಿಸಿದ್ದರು. ಅಂದಿನಿಂದ ಸುದೀರ್ಘ ವಿಚಾರಣೆ ನಡೆಸಿ ವಾದ-ವಿವಾದ ಆಲಿಸಿದ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ.