ನಾಗಪುರ: ಶೌಚಾಲಯದಲ್ಲಿ ರಹಸ್ಯವಾಗಿ ಮಹಿಳೆಯರ ಆಕ್ಷೇಪಾರ್ಹ ವಿಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇಟ್ಟಾರಿಯ ನಿವಾಸಿ ಆರೋಪಿ ಮಂಗೇಶ್ ಖಾಪ್ರೆಯನ್ನು(38) ಪೊಲೀಸರು ಬಂಧಿಸಿದ್ದಾರೆ. ಜನವರಿ 31ರಂದು ಸೀತಾಬುರ್ದಿಯ ಸಾಂಸ್ಕೃತಿಕ ಕೇಂದ್ರದಲ್ಲಿ ಈ ಕೃತ್ಯ ನಡೆದಿದೆ.
ಶೌಚಾಲಯದ ಕಿಟಕಿ ಮೂಲಕ ರಹಸ್ಯವಾಗಿ ವಿಡಿಯೊ ಚಿತ್ರೀಕರಿಸುತ್ತಿದ್ದ ಖಾಪ್ರೆಯನ್ನು ಮಹಿಳೆಯರು ಪತ್ತೆ ಮಾಡಿದ್ದಾರೆ. ಮಹಿಳೆಯರು ಕೂಗಿಕೊಂಡಾಗ ಸ್ಥಳದಲ್ಲಿದ್ದ ಜನರು ಆತನನ್ನು ಹಿಡಿದಿದ್ದಾರೆ.
ಆರೋಪಿಯ ಮೊಬೈಲ್ನಲ್ಲಿ 20 ಆಕ್ಷೇಪಾರ್ಹ ವಿಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷವೂ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮದಲ್ಲಿ ಖಾಪ್ರೆ ಇಂಥದ್ದೇ ಕೃತ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.