ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 29ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಜುಲೈ 24ರಿಂದ ಜುಲೈ 26ವರೆಗೂ ಈ ಮೂರು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ನಂತರ ಜುಲೈ 27ರಿಂದ 29ರ ವರೆಗೆ ಅತಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದ ಕರಾವಳಿಯಲ್ಲಿ ಟ್ರಫ್ ಇದೆ. ಪಶ್ಚಿಮ ಮಧ್ಯ ಮತ್ತು ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಮೇಲ್ಮುಖ ವಾಯುಮಾರ್ಗದ ಪರಿಚಲನೆ ಇರುವುದರಿಂದ ಇದರ ಪ್ರಭಾವದಿಂದ ಜುಲೈ 29ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.