ಅಹಮದಾಬಾದ್ : ಗುಜರಾತಿನ ಅಹಮದಾಬಾದ್ನಲ್ಲಿ 265 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಫ್ಲೈಟ್ 171 ವಿಮಾನ ಅಪಘಾತದಲ್ಲಿ ಉಂಟಾದ ಬೆಂಕಿಯಲ್ಲಿ ಧಗಧಗಿಸಿ ಹೋದ ವಿಮಾನದ ಅವಶೇಷಗಳಲ್ಲಿ ಭಗವದ್ಗೀತೆಯ ಪುಸ್ತಕ ಸುಡದೆ ಹಾಗೆಯೇ ಇರುವುದು ಕಂಡುಬಂದಿದೆ. ತೀವ್ರ ತೆರನಾದ ಬೆಂಕಿಯ ಜ್ವಾಲೆಯ ಹೊರತಾಗಿಯೂ, ಪವಿತ್ರ ಗ್ರಂಥವು ಹಾನಿಗೊಳಗಾಗದೆ ಉಳಿದಿದೆ.
ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಗುರುವಾರ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು, ವಿಮಾನದಲ್ಲಿ 241 ಜನರು ಸಾವಿಗೀಡಾದರು. ವಿಮಾನದಲ್ಲಿದ್ದ ಒಬ್ಬ ವ್ಯಕ್ತಿ ಮಾತ್ರ ಅಪಘಾತದಿಂದ ಬದುಕುಳಿದರು. ಜನನಿಬಿಡ ಪ್ರದೇಶದ ಮೇಲೆ ಅವಶೇಷಗಳ ಭಾಗಗಳು ಬಿದ್ದವು, ಹತ್ತಿರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ವಿಮಾನ ನೇರವಾಗಿ ಅಪ್ಪಳಿಸಿತು.
ಸುಟ್ಟು ಕರಕಲಾಗಿ ಹೊಗೆಯಾಡುತ್ತಿರುವ ವಿಮಾನದ ಅವಶೇಷಗಳಲ್ಲಿ ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆಯ ಪ್ರತಿ ಏನೂ ಆಗದೆ ಹಾಗೆಯೇ ಇರುವುದು ಕಂಡುಬಂದಿದೆ.
ಗುರುವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ, ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ತಾಪಮಾನವು ತೀವ್ರ ಮಟ್ಟಕ್ಕೆ ಏರಿದ್ದರಿಂದ ಅಪಘಾತದಿಂದ ಜನರನ್ನು ರಕ್ಷಿಸುವ ಪ್ರಯತ್ನಗಳು ವಿಫಲವಾದವು ಎಂದು ಹೇಳಿದರು.
ವಿಮಾನದ ಹೆಚ್ಚಿನ ಭಾಗ ಮತ್ತು ವಿಮಾನದಲ್ಲಿದ್ದ ಇತರ ವಸ್ತುಗಳು ಬೆಂಕಿಯಿಂದ ಸುಟ್ಟು ಹೋದರೂ ಭಗವದ್ಗೀತೆಯ ಪ್ರತಿ ಬಹುತೇಕವಾಗಿ ಹಾನಿಗೊಳಗಾಗದೇ ಹಾಗೆಯೇ ಇದೆ ಎಂದು ವರದಿಯಾಗಿದೆ.
ಭಗವದ್ಗೀತೆ ಪುಸ್ತಕದ ಪ್ರತಿ ಪುಟಗಳು ಹಾಗೆಯೇ ಇದ್ದವು, ಅದರ ಪಠ್ಯ ಮತ್ತು ಚಿತ್ರಗಳು ಹಾನಿಗೊಳಗಾದೆ ಹಾಗೆಯೇ ಇವೆ. ಆದಾಗ್ಯೂ, ಜಾಕೆಟ್ ಮಾಡಿದ ಕವರ್ ಪೇಜ್ ಅಲ್ಲಲ್ಲಿ ಮಸುಕಾದಂತೆ ಕಂಡುಬಂದಿದೆ ಬಿಟ್ಟರೆ ಬೇರೆಲ್ಲೂ ಅದಕ್ಕೆ ಹಾನಿಯಾಗಿಲ್ಲ.
ಭಗವದ್ಗೀತೆ ಪುಸ್ತಕದ ವೀಡಿಯೊಗಳು ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ವಿಸ್ಮಯಕ್ಕೆ ಕಾರಣವಾಗಿದೆ., ಅನೇಕರು ಇದನ್ನು ಕಾಕತಾಳೀಯ ಎಂದು ಹೇಳಿದ್ದಾರೆ.
ಇದರ ವೀಡಿಯೊವನ್ನು ಮೂಲತಃ amdavad.clicks ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ವಿಮಾನ ಅಪಘಾತದಲ್ಲಿ ಎಲ್ಲವೂ ನಾಶವಾಯಿತು ಆದರೆ ಭಗವದ್ಗೀತೆ ಹಾಗೆಯೇ ಇತ್ತು” ಎಂಬ ಶೀರ್ಷಿಕೆ ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾರ್ಯಾಚರಣೆಯ ವೇಳೆ ಸಿಕ್ಕ ಭಗವದ್ಗೀತೆ ಪುಸ್ತಕವನ್ನು ವ್ಯಕ್ತಿಯೊಬ್ಬರು ತೆರೆದು ತೋರಿಸುತ್ತಿರುವುದನ್ನು ಕಾಣಬಹುದು.
ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಭಾರತೀಯ ಮೂಲದ ಬ್ರಿಟೀಷ್ ಪ್ರಜೆ ವಿಶ್ವಾಸಕುಮಾರ ರಮೇಶ ಎಂಬವರು ಮಾತ್ರ ಪವಾಡಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬುದುಕಿ ಉಳಿದಿದ್ದಾರೆ.
ಭಾರತದ ವಾಯುಯಾನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಏರ್ ಇಂಡಿಯಾ ಅಪಘಾತವು ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರನ್ನೂ ಒಳಗೊಂಡಂತೆ ಸುಮಾರು 265 ಜೀವಗಳನ್ನು ಬಲಿ ತೆಗೆದುಕೊಂಡಿತು.
ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಲಾಗಿದೆ.