ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಾಗ ನದಿಗೆ ಹಾರಿದ ನಂತರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು 23 ವರ್ಷದ ಇಮ್ತಿಯಾಜ್ ಅಹ್ಮದ್ ಮಗ್ರೆ ಎಂದು ಗುರುತಿಸಲಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್ಇಟಿಗಾಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಿದ ನಂತರ, ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳನ್ನು ಭಯೋತ್ಪಾದಕ ಅಡಗುತಾಣಕ್ಕೆ ತೋರಿಸಲು ಹೋಗುತ್ತಿದ್ದಾಗ ತಪ್ಪಿಸಿಕೊಂಡು ಪರಾರಿಯಾಗಲು ನದಿಗೆ ಹಾರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಎತ್ತರದ ಪ್ರದೇಶದಿಂದ ತೆಗೆದ ವೀಡಿಯೊದಲ್ಲಿ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 23 ವರ್ಷದ ಇಮಿತಿಯಾಜ್ ಅಹ್ಮದ್ ಮಗ್ರೆ ನದಿಗೆ ಹಾರುವುದು ಕಂಡುಬಂದಿದೆ.
ಶನಿವಾರ ಪೊಲೀಸರು ಮ್ಯಾಗ್ರೆ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆಯ ಸಮಯದಲ್ಲಿ, ಕುಲ್ಗಮ್ನ ತಂಗ್ಮಾರ್ಗ್ನಲ್ಲಿರುವ ಕಾಡಿನಲ್ಲಿ ಅಡಗಿರುವ ಭಯೋತ್ಪಾದಕರಿಗೆ ಆಹಾರ ಮತ್ತು ಲಾಜಿಸ್ಟಿಕ್ಸ್ ನೀಡಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಂತರ ಭಯೋತ್ಪಾದಕರ ಅಡಗುತಾಣಕ್ಕೆ ದಾಳಿ ಮಾಡಲು ಭದ್ರತಾ ಪಡೆಗಳನ್ನು ಕರೆದೊಯ್ಯಲು ಆತ ಒಪ್ಪಿಕೊಂಡಿದ್ದ. ಅದರಂತೆ ಭಾನುವಾರ ಬೆಳಿಗ್ಗೆ, ಪೊಲೀಸ್ ಮತ್ತು ಸೇನೆಯ ಜಂಟಿ ತಂಡದ ಜೊತೆ ಹೋಗುವಾಗ ತಪ್ಪಿಸಿಕೊಳ್ಳಲು ಮ್ಯಾಗ್ರೆ ವೆಶಾವ್ ನದಿಗೆ ಹಾರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆತ ತಪ್ಪಿಸಿಕೊಳ್ಳುವ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಆ ವ್ಯಕ್ತಿ ಈಜಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ, ಆದರೆ ಬಲವಾದ ಪ್ರವಾಹ ಆತನನ್ನು ಎಳೆದೊಯ್ದ ಕಾರಣ ಆತ ನೀರಿನಲ್ಲಿ ಮುಳುಗಿದ್ದಾನೆ. ಆತನ ಕುಟುಂಬವು ಇದು ದುಷ್ಕೃತ್ಯ, ಆತ ಪೊಲೀಸ್ ಕಸ್ಟಡಿಯಲ್ಲಿ ಸತ್ತಿದ್ದಾನೆ ಎಂದು ಆರೋಪಿಸಿದೆ.
ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವವರನ್ನು ಭದ್ರತಾ ಪಡೆಗಳು ಖಂಡಿಸಿವೆ ಎಂದು ಮೂಲಗಳು ತಿಳಿಸಿವೆ. ಗಡಿಯಾಚೆಗಿನ ಸಂಪರ್ಕ ಹೊಂದಿರುವ ಭಯೋತ್ಪಾದಕರಿಗೆ ಆಹಾರ ಮತ್ತು ಲಾಜಿಸ್ಟಿಕ್ಸ್ ನೀಡುತ್ತಿದ್ದಾಗ ಸ್ಥಳೀಯ ನಿವಾಸಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ.