ಬೆಳಗಾವಿ: ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಲೈಂಗಿಕ ಕಿರುಕುಳ ನೀಡಿದ ಆರೋಪಿ ಒಬ್ಬನಿಗೆ ಶಿಕ್ಷೆ ವಿಧಿಸಿದೆ. ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 10,000 ದಂಡ ವಿಧಿಸಿ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕು ವಾಣಿ ತೋಟ ಕೇಸ್ತಿಯ ಸಚಿನ್ ವಿರೂಪಾಕ್ಷ ವಾಣಿ (30) ಶಿಕ್ಷೆಗೊಳಗಾದ ಆರೋಪಿ.
2022 ರ ಜುಲೈ 9 ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಬಾಲಕಿಯ ಹಿಂದಿನಿಂದ ಬಂದ ಆರೋಪಿ, ಕಾಲೇಜಿಗೆ ಹೋಗಿದ್ದೆಯಾ ಎಂದು ಕೇಳಿದ್ದಾನೆ. ಆಗ ಆಕೆ ಹೌದು ಎಂದಾಗ ಸಲುಗೆ ಬೆಳೆಸಿ ಮಾತನಾಡಿ ಎದೆಯ ಭಾಗ ಹಿಡಿದಿದ್ದಾನೆ. ಅವನಿಂದ ಬಿಡಿಸಿಕೊಂಡ ಬಾಲಕಿ ಹೀಗೇಕೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ, ಆತ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು ಮದುವೆ ಆಗಬೇಕು ಎಂದು ಹೇಳಿ ಅವಳನ್ನು ಹಿಡಿದುಕೊಳ್ಳಲು ಬಂದಿದ್ದಾನೆ. ನಾನು ಇನ್ನೂ ಚಿಕ್ಕವಳಿದ್ದು ಈ ರೀತಿ ಮಾಡಬೇಡ ಎಂದರೂ ಕೇಳದೆ ಆತ ಅವಳನ್ನು ಎಳೆದಾಡಿದ್ದಾನೆ.
ಈ ಅಪರಾಧದ ಬಗ್ಗೆ ತನಿಖಾಧಿಕಾರಿ ಸಂಕೇಶ್ವರ ಪಿಎಸ್ಐ ಜಿ.ಬಿ. ಕೊಂಗನೊಳ್ಳಿ ಅವರು ತನಿಖೆ ನಡೆಸಿ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ನ್ಯಾಯಾಲಯ ಬೆಳಗಾವಿ-01 ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಧೀಶರಾದ ಸಿಎಂ ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ 5 ಸಾಕ್ಷಿಗಳ ವಿಚಾರಣೆ, 19 ದಾಖಲೆ ಆಧಾರದ ಮೇಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ದಂಡವನ್ನು ತುಂಬದೇ ಇದ್ದಲ್ಲಿ ಇನ್ನೂ ಆರು ತಿಂಗಳು ಶಿಕ್ಷೆಯನ್ನು ವಿಧಿಸುವುದಾಗಿ ತಿಳಿಸಲಾಗಿದೆ.
ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಹಾಜರಾಗಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


