ಬೆಳಗಾವಿ: ಬಾಲಕಿಯನ್ನು ಪುಸಲಾಯಿಸಿ ಬರಲು ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನಿಗೆ ಬೆಳಗಾವಿಯ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿ ಮಹತ್ಚದ ತೀರ್ಪು ನೀಡಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬುಧವಾರದಂದು, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 1,18,000 ದಂಡ ವಿಧಿಸಿ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕು ಬೆಳವಿ ಗ್ರಾಮದ ಪ್ರವೀಣ ಭೀಮರಾವ್ ಅವುಬಾಯಿ ಗೋಳ (23) ಶಿಕ್ಷೆಗಳಾದ ಆರೋಪಿ. 2021 ರ ಜುಲೈ 21 ರಂದು ಈತ ಬಾಲಕಿಗೆ ಸಂಜೆ ವೇಳೆ ಹುಕ್ಕೇರಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಬರಲು ಹೇಳಿದ್ದಾನೆ. ಅವರಿಬ್ಬರು ಮೊದಲೇ ಮಾತನಾಡಿಕೊಂಡಂತೆ ಅವಳು ಊರಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಬಸ್ ಮೂಲಕ ಹುಕ್ಕೇರಿಗೆ ಬಂದು ಆರೋಪಿಯನ್ನು ಭೇಟಿಯಾಗಿ ಅನಂತರ ಇಬ್ಬರು ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದಾರೆ. ಬೆಂಗಳೂರಿಗೆ ಕರೆದುಕೊಂಡು ಹೋದ ನಂತರ ಈತ ಅಲ್ಲಿಯೇ ಮದುವೆಯಾಗೋಣ ಎಂದು ಹೇಳಿ ಒತ್ತಾಯಪೂರ್ವಕವಾಗಿ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿರುವ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ದಾಖಲಾಧಿಕಾರಿ ಎಲ್.ಎಲ್. ಪಟ್ಟೇನವರ ತನಿಖೆ ಕೈಗೊಂಡಿದ್ದರು. ಎಂ.ಎಂ.ತಹಶೀಲ್ದಾರ ಮುಂದಿನ ತನಿಖೆ ನಡೆಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ 11 ಸಾಕ್ಷಿಗಳ ವಿಚಾರಣೆ, 48 ದಾಖಲೆ ಮತ್ತು 2 ಮುದ್ದೆ ಮಾಲುಗಳ ಆಧಾರದ ಮೇಲೆ ಆತನ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 1,18,000 ದಂಡ ತುಂಬದೇ ಇದ್ದ ಕಾಲಕ್ಕೆ ಎರಡು ವರ್ಷ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ಐದು ವರ್ಷಗಳವರೆಗೆ ಮುದ್ದತ್ ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ವಾದ ಮಂಡಿಸಿದ್ದರು.


