ಬೆಳಗಾವಿ : ನಿಮ್ಮ ಅಚ್ಚುಮೆಚ್ಚಿನ ‘ಜನಜೀವಾಳ’ಕ್ಕೆ ಈಗ ಬರೋಬ್ಬರಿ 78 ವರ್ಷ. ಇನ್ನು ಕೇವಲ 22 ವರ್ಷ ಪೂರ್ಣಗೊಳಿಸಿದರೆ ಶತಕ ಬಾರಿಸಲಿದೆ ನಿಮ್ಮ ಜನಜೀವಾಳ.
ಬೆಳಗಾವಿ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಲ್ಲಿ ಮನೆ ಮಾತಾಗಿರುವ ‘ಜನ ಜೀವಾಳ’ ಪತ್ರಿಕೆಯನ್ನು ಜನತೆ ತಮ್ಮದೇ ಪತ್ರಿಕೆ ಎಂಬಂತೆ ಇದುವರೆಗೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯ ಪತ್ರಿಕೋದ್ಯಮಕ್ಕೆ 177 ವರ್ಷಗಳ ಭವ್ಯವಾದ ಹಿನ್ನೆಲೆ ಇದೆ. ಮೊದಲ ಕನ್ನಡ ಪತ್ರಿಕೆ ಮಂಗಳೂರು ಸಮಾಚಾರ 1843ರಲ್ಲಿ ಪ್ರಕಟಗೊಂಡ ಆರು ವರ್ಷಗಳಲ್ಲೇ ಬೆಳಗಾವಿಯ ಮೊದಲ ಪತ್ರಿಕೆಯು ಬೆಳಕು ಕಂಡಿತು. 1849 ರಲ್ಲಿ ಹೊರಬಂದ ಸುಬುದ್ದಿ ಪ್ರಕಾಶ ಎಂಬ ಕನ್ನಡದ ಪ್ರಪ್ರಥಮ ವಾರಪತ್ರಿಕೆ ಇಲ್ಲಿಂದಲೇ ಪ್ರಾರಂಭವಾಗಿರುವ ಹೆಮ್ಮೆಯು ಈ ಜಿಲ್ಲೆಗೆ ಇದೆ. ಅದಾಗಿ ಒಂದು ಶತಮಾನದ ನಂತರ ಹುಟ್ಟಿಕೊಂಡ ‘ಜನ ಜೀವಾಳ’ ಬೆಳಗಾವಿಯ ಗಡಿಭಾಗದಲ್ಲಿ ಭಾಷಾ ವಿವಾದವಾಗಿ ಕನ್ನಡಿಗರ ನೀತಿಯನ್ನು ಎತ್ತಿ ಹಿಡಿದು ಮರಾಠಿಗರ ಪ್ರಚೋದನೆಯ ಭಾಷಣ, ಕಿಡಿಗೇಡಿತನ, ಗೂಂಡಾಗಿರಿಯ ವಿರುದ್ಧ ಧ್ವನಿ ಎತ್ತಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದು ಇತಿಹಾಸ. ಕನ್ನಡಿಗರನ್ನು ಬೆದರಿಸಿ ಅವರ ಮೇಲೆ ದಬ್ಬಾಳಿಕೆ ನಡೆಸತೊಡಗಿದ ಮರಾಠಿ ಪುಂಡರ ದುಷ್ಕೃತ್ಯಗಳನ್ನು ಬಯಲಿಗೆಳೆದು ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಹುಟ್ಟಿಸಿ ಒಂದುಗೂಡಿಸುವ ಕೆಲಸ ಮಾಡುತ್ತಾ ಬಂದಿರುವ ,’ಜನ ಜೀವಾಳ’ ಎಂದೂ ತನ್ನ ನೀತಿ-ಸಿದ್ದಾಂತಗಳ ಜೊತೆ ರಾಜಿ ಮಾಡಿಕೊಳ್ಳದೆ ಕನ್ನಡಕ್ಕಾಗಿ ಬಹುದೊಡ್ಡ ಧ್ವನಿಯಾಗಿ ನಿಂತಿದೆ. ಈ ಅವಧಿಯಲ್ಲಿ ‘ಜನ ಜೀವಾಳ’ ಪಟ್ಟ ಕಷ್ಟ ನಷ್ಟ ಹೇಳತೀರದು.
ಆದರೂ ಎದೆಗುಂದದೆ ಕನ್ನಡಿಗರಲ್ಲಿ ಕನ್ನಡತನದ ಅಭಿಮಾನ ಹುಟ್ಟಿಸಲು ಕಾರಣವಾಗಿರುವುದು ಇಂದು ನೆನೆಸಿಕೊಂಡರೆ ರೋಮಾಂಚನ ಎನಿಸುತ್ತದೆ. ಕನ್ನಡ ಕೈಂಕರ್ಯದಲ್ಲಿ ಅತ್ಯಂತ ಬಲವಾಗಿ ತನ್ನ ಸೇವೆ ಸಲ್ಲಿಸಿರುವ ಜನಜೀವಾಳ ಗಡಿ ಭಾಗದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡುತ್ತಾ ಬಂದಿದೆ.
ಜನಜೀವಾಳ ಪತ್ರಿಕಾ ಕಾರ್ಯಾಲಯದ ಮೇಲೆ ಕಲ್ಲು ತೂರಾಟ ಪ್ರಯತ್ನ ನಡೆದರೂ ಅದಕ್ಕೆ ಅಂಜದೇ, ಅಳುಕದೆ ತನ್ನ ಕನ್ನಡಪರ ನಿಲುವನ್ನು ಕಳೆದು 8 ದಶಕಗಳಿಂದ ಮಾಡುತ್ತಾ ಬಂದಿರುವುದು ಗತ ಇತಿಹಾಸದ ಹೆಗ್ಗಳಿಕೆಯಾಗಿದೆ. ಬೆಳಗಾವಿಯನ್ನು ಕಬಳಿಸುವ ದುಷ್ಟಕೂಟವನ್ನು ವಿಫಲಗೊಳಿಸಲು ಜನಜೀವಾಳ ಎಲ್ಲಾ ರೀತಿಯಿಂದ ಶ್ರಮಿಸಿದ ಫಲವಾಗಿ ಇಂದು ಬೆಳಗಾವಿಯಲ್ಲಿ ಕನ್ನಡ ಅತ್ಯಂತ ಹೆಮ್ಮೆರವಾಗಿ ಗಟ್ಟಿಯಾಗಿ ಬೆಳೆದು ನಿಂತಿದೆ. ಜನಜೀವಾಳದ ಭಾಷಾ ಪ್ರೇಮ ಹಾಗೂ ಕನ್ನಡಿಗರನ್ನು ಜಾಗೃತಿಗೊಳಿಸಿದ ಫಲವಾಗಿಯೇ ಇತ್ತೀಚಿನ ಕೆಲಸಗಳಲ್ಲಿ ಮಹಾರಾಷ್ಟ್ರವಾದಿಗಳ ಶಕ್ತಿ ಕ್ರಮೇಣ ಕುಂದುತ್ತಾ ಬಂದು ಇಂದು ಅವರ ಧ್ವನಿ ಎನ್ನುವುದು ತೀರಾ ದುರ್ಬಲವಾಗಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಅಚ್ಚುಮೆಚ್ಚಿನ ಜನಜೀವಾಳ ಎನ್ನುವುದನ್ನು ಯಾರೊಬ್ಬರೂ ಮರೆಯುವಂತಿಲ್ಲ. ಜನಜೀವಾಳ ಪತ್ರಕರ್ತರ ಸಾಹಸ, ಶ್ರಮ, ತ್ಯಾಗ ಉಲ್ಲೇಖನೀಯವಾಗಿದೆ.
ಬೆಳಗಾವಿ ಕನ್ನಡಿಗರಲ್ಲಿ
ಕನ್ನಡ ಪ್ರೇಮವನ್ನು ಸದಾ ಪ್ರಚುರ ಪಡಿಸುತ್ತಾ ಬಂದಿರುವ ಜನಜೀವಾಳ ಕನ್ನಡಿಗರನ್ನು ಬಡಿದೆಚ್ಚರಿಸಿ ಮರಾಠಿಗರಿಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಜನಜಿವಾಳದ ಹಳೆಯ ಗತ ಇತಿಹಾಸದ ಪತ್ರಿಕೆಗಳನ್ನು ಓದುತ್ತಾ ಬಂದರೆ ಬೆಳಗಾವಿಯ ಒಂದು ವಿಭಿನ್ನ ಲೋಕವೇ ಅನಾವರಣಗೊಳ್ಳುತ್ತದೆ. ಅಷ್ಟೊಂದು ರೀತಿಯಲ್ಲಿ ಬೆಳಗಾವಿಯಲ್ಲಿ ಕನ್ನಡದ ನೆಲೆಯನ್ನು ಗಟ್ಟಿಗೊಳಿಸಿದ ಶ್ರೇಯಸ್ಸು ಜನ ಜೀವಾಳಕ್ಕೆ ಸಲ್ಲುತ್ತದೆ.
ಮುಂಬರುವ ದಿನಗಳಲ್ಲೂ ಜನಜೀವಾಳ ಬೆಳಗಾವಿಯಲ್ಲಿ ತನ್ನ ಮುಖ್ಯವಾಗಿರುವ ಪತ್ರಿಕಾಧರ್ಮದ ಮೇಲೆ ಪ್ರಾಮಾಣಿಕವಾಗಿ ತನ್ನ ಬದ್ಧತೆಯನ್ನು ಅನುಸರಿಸಿ ಇನ್ನಷ್ಟು ಕನ್ನಡದ ಸೇವೆ ಮಾಡಲು ಹಾತೊರೆಯುತ್ತಿದೆ. ಈ ನಿಟ್ಟಿನಲ್ಲಿ ಉದಾರ ಮನಸ್ಸಿನವರಾದ ಕನ್ನಡಿಗರು ಸದಾ ನಮಗೆ ಬೆಂಬಲವಾಗಿ ನಿಲ್ಲಬೇಕು. – ಸಂಪಾದಕ
18 ರ ಉತ್ಸಾಹದ ನಿಮ್ಮೆಲ್ಲರ ಅಚ್ಚುಮೆಚ್ಚಿನ ‘ಜನ ಜೀವಾಳ’ ಕ್ಕೆ ಈಗ 78 ವರ್ಷ !
