ಬೆಳಗಾವಿ: ವೃತ್ತಿಯಲ್ಲಿ ಬ್ಯಾಂಕರ್ ಆಗಿ ನಿವೃತ್ತಿಗೊಂಡು, ಪುಟ್ಟ ಮಕ್ಕಳನ್ನು ಸಂಗೀತದಲ್ಲಿ ಉನ್ನತ ಮಟ್ಟಕ್ಕೆ ಕರೆದೊಯ್ಯುವ ಉದ್ದೇಶದಿಂದ, ಹೊಸ ಆವಿಷ್ಕಾರದ ಮನೋಭಾವನೆಯಿಂದ ಉತ್ತರ ಕರ್ನಾಟಕಕ್ಕೆ ಏಕೈಕ ಸುಗಮ ಸಂಗೀತ ಶಾಲೆಯಾದ ನಾದ ಸುಧಾ ಸುಗಮ ಸಂಗೀತ ಶಾಲೆಯನ್ನು 2009ರಲ್ಲಿ ಸ್ಥಾಪಿಸಿದ್ದು, ಈಗ 16 ಸಂವತ್ಸರಗಳು ಕಳೆದಿವೆ. ಮೈಸೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಸ್ ಸಿ ಪದವಿ, ಆನಂತರ ಸಿಂಡಿಕೇಟ್ ಬ್ಯಾಂಕ್ ನಲ್ಲಿ 34 ವರ್ಷ ಸೇವೆ ಸಲ್ಲಿಸಿದ್ದು, ನಂತರ ಸಂಗೀತದಲ್ಲಿ ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಶಾಲೆ ಪ್ರಾರಂಭಗೊಂಡ ಕೆಲವೇ ಸಮಯದಲ್ಲಿ ವಿದ್ಯಾರ್ಥಿನಿ ನಿಹಾರಿಕಾ 2012ರಲ್ಲಿ ಸುವರ್ಣ ವಾಹಿನಿಯ ನಮ್ಮೂರ ಹಮ್ಮೀರದಲ್ಲಿ ಹಾಗೂ 2013 ರಲ್ಲಿ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನದಲ್ಲಿ ಹಾಡಿ ಭದ್ರ ಬುನಾದಿ ಹಾಕಿರುತ್ತಾಳೆ.
2015 ರಲ್ಲಿ ಈ ಟಿವಿಯಲ್ಲಿ ಎಸ್ ಪಿ ಬಿ ಅವರ ಎದೆ ತುಂಬಿ ಹಾಡುವೆನು ಸಂಗೀತ ರಿಯಾಲಿಟಿ ಶೋನಲ್ಲಿ ವಿದ್ಯಾರ್ಥಿ ಮಾಸ್ಟರ್ ವಿಶ್ವಪ್ರಸಾದ್ ಗಾಣಗಿ ಪ್ರಥಮ ಸ್ಥಾನ ಗಳಿಸಿ ಬೆಳಗಾವಿಯ ಮಕ್ಕಳು ಬೆಂಗಳೂರು, ಮೈಸೂರಿನ ಮಕ್ಕಳಿಗೆ ಪೈಪೋಟಿ ನೀಡಬಹುದು ಎಂದು ತೋರಿಸಿಕೊಟ್ಟು ನಾದ ಸುಧಾ ಶಾಲೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಯಿತು. ನಂತರ ಇದೇ ವಿದ್ಯಾರ್ಥಿ ಹಿಂದಿ ರಿಯಾಲಿಟಿ ಶೋ ಆದ &ಟಿವಿಯ ವಾಯ್ಸ್ ಕಿಡ್ಸ್ ನಲ್ಲಿ ಅಂತಿಮ ಹಂತದವರೆಗೂ ತಲುಪಿ ಇಡೀ ಪ್ರಪಂಚಕ್ಕೆ ನಾದ ಸುಧಾ ಸಂಗೀತ ಶಾಲೆಯನ್ನು ಪರಿಚಯಿಸಿಕೊಟ್ಟನು. ನಂತರ 2016 ರಲ್ಲಿ ಇನ್ನೊಬ್ಬ ವಿದ್ಯಾರ್ಥಿನಿ ಸಾಕ್ಷಿ ನಾಗನೂರು ಎದೆ ತುಂಬಿ ಹಾಡುವೆನು ಶೋನಲ್ಲಿ ಉಪಾಂತ್ಯ ಹಂತದವರೆಗೂ ತಲುಪಿದ್ದು ಒಂದು ವಿಶೇಷ. 2017- 18 ರಲ್ಲಿ ನಿಹಾರಿಕಾ ಉದಯ ವಾಹಿನಿಯ ಉದಯ ಸಿಂಗರ್ ಜೂನಿಯರ್ಸ್ ಸಂಗೀತ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿರುವುದು ಅಲ್ಲದೇ ನಂತರ 2019 ರಲ್ಲಿ ಕಲರ್ಸ್ ವಾಹಿನಿಯ ಕನ್ನಡ ಕೋಗಿಲೆ ಸೂಪರ್ ಸೀಸನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹಾಡಿರುತ್ತಾಳೆ.
2020 ರಲ್ಲಿ ಕುಮಾರಿ ಸ್ವಾತಿ ಸುತಾರ ಜೀ ವಾಹಿನಿಯ ಸಾರೆಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಉಪಾಂತ್ಯ ಹಂತದವರೆಗೂ ತಲುಪಿದ್ದು, ನಾದ ಸುಧಾ ಮಕ್ಕಳು ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಪ್ರವೃತ್ತಿಯನ್ನು ಮುಂದುವರಿಸಿದಂತಾಯಿತು.
2019ರಲ್ಲಿ ದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಗೆದ್ದು ಈ ಸಂಸ್ಥೆಯ ವಿದ್ಯಾರ್ಥಿನಿ ಸ್ನೇಹಾ ಕಾಟೆ ಅವರು ಸಂಗೀತವಲ್ಲದೇ ಬೇರೆ ಕ್ಷೇತ್ರದಲ್ಲೂ ಸಾಧನೆ ಮಾಡಿ ನಾದ ಸುಧಾ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ.
ನಂತರದ ದಿನಗಳಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆ ಹಿಂತಿರುಗಿ ನೋಡಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಇದುವರೆಗೂ ಕರ್ನಾಟಕ ಅಲ್ಲದೇ ಹೊರರಾಜ್ಯಗಳಲ್ಲಿ ಕೂಡ ಅನೇಕ ಸಂಗೀತ, ನೃತ್ಯದ ಕಾರ್ಯಕ್ರಮಗಳನ್ನು ನೀಡಿರುತ್ತದೆ. ಇದರಲ್ಲಿ ಮುಖ್ಯವಾಗಿ ಇತ್ತೀಚೆಗೆ ದುಬೈನಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ಹಾಡಿರುವುದು ವಿದೇಶದಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
2018ರಲ್ಲಿ ನಾದ ಸುಧಾದ 12 ಭಕ್ತಿಗೀತೆಗಳನ್ನು ಒಳಗೊಂಡ ಧ್ವನಿಸುರುಳಿ ಬಿಡುಗಡೆ ಆಗಿರುತ್ತದೆ. ಅಲ್ಲದೇ ನಾದ ಸುಧಾ ವಿದ್ಯಾರ್ಥಿಗಳು ಫೇಸ್ ಬುಕ್ ಲೈವ್ ನಲ್ಲಿ ಹಾಡಿದ್ದು ಅದನ್ನು ಗಾಯಕಿ ಲತಾ ಮಂಗೇಶ್ಕರ್ ಅವರು ವೀಕ್ಷಿಸಿ ಪ್ರಶಂಸಿಸಿದ್ದಾರೆ. ಡಾ. ಸುಧಾ ಮೂರ್ತಿ ಅವರ ಸಮ್ಮುಖದಲ್ಲಿ ಕೂಡ ಮಕ್ಕಳು ಹಾಡಿರುವ ಹೆಗ್ಗಳಿಕೆ ಇದೆ. ಅಲ್ಲದೇ ಬೆಳಗಾವಿ ಎಫ್ ಎಂ ವೇಣುಧ್ವನಿಯಲ್ಲಿ ಹಾಡಿರುತ್ತಾರೆ. ಕರ್ನಾಟಕ ಸರ್ಕಾರ ನಡೆಸುವ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು, ಬೆಳವಡಿ ಮಲ್ಲಮ್ಮನ ಉತ್ಸವ, ಕಿತ್ತೂರು ಉತ್ಸವ ಹೀಗೆ ನೂರಾರು ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿರುತ್ತಾರೆ.
ಇತ್ತೀಚೆಗೆ ಘರ್ ಕುಲ್ ಬೆನಕನಹಳ್ಳಿಯ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಭಕ್ತುಸಂಗೀತದ ರಸದೌತಣವನ್ನು ಉಣಬಡಿಸುವ ನಿಟ್ಟಿನಲ್ಲಿ ನಾದ ಸುಧಾ ವಿದ್ಯಾರ್ಥಿಗಳು ಭಜನಾಮೃತ ಕಾರ್ಯಕ್ರಮ ನೀಡಿದ್ದು, ನಾದ ಸುಧಾ ಶಾಲೆಯ 300ನೇ ಕಾರ್ಯಕ್ರಮವನ್ನು ಎಂದೆಂದಿಗೂ ಅಚ್ಚಳಿಯದಂತೆ ಮಾಡಿದ್ದು ಒಂದು ಮೈಲಿಗಲ್ಲು ಸ್ಥಾಪಿಸಿದಂತಾಯಿತು.
ನಾದ ಸುಧಾ ವಿದ್ಯಾರ್ಥಿಗಳು ಹಾಗೂ ಗುರುಗಳಾದ ಡಾ.ಸತ್ಯನಾರಾಯಣ ಅವರು ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದು ಅತ್ಯಂತ ಹೆಮ್ಮೆಯ ಸಂಗತಿ.
2016ರಲ್ಲಿ ಡಾ.ಸತ್ಯನಾರಾಯಣ ಅವರ ಪಾಲಿಗೆ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಸಂಗೀತ ಸಾಧನಾ ಪ್ರಶಸ್ತಿ, 2018ರಲ್ಲಿ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶೇಷ ಸಂಗೀತ ಸಾಧನಾ ಪ್ರಶಸ್ತಿ, 2019ರಲ್ಲಿ ಸ್ನೇಹ ಕಾಟೆಗೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬೆಳ್ಳಿ ಪದಕ ಸಿಕ್ಕಿರುತ್ತದೆ. 2021ರಲ್ಲಿ ನಿಹಾರಿಕಾ ಪಾಲಿಗೆ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾ ಪ್ರಶಸ್ತಿ ಲಭಿಸಿದೆ.
2021ರಲ್ಲಿ ಡಾ.ಸತ್ಯನಾರಾಯಣ ಅವರಿಗೆ ತಮಿಳುನಾಡಿನ ಹೊಸೂರಿನಲ್ಲಿ
ಚಿತ್ರನಟಿ ಸುಧಾ ರಾಣಿ ಅವರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕಾರ,
2023ರಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
2025ರಲ್ಲಿ ಕನ್ನಡಾಂಬೆ ಸಂಸ್ಥೆಯ ವತಿಯಿಂದ ದುಬೈನಲ್ಲಿ ಜರುಗಿದ ಕರ್ನಾಟಕ ಉತ್ಸವದಲ್ಲಿ ಇಂಟರ್ ನ್ಯಾಷನಲ್ ಅಚೀವ್ ಮೆಂಟ್ ಅವಾರ್ಡ್ ಲಭಿಸಿರುತ್ತದೆ.
ಅಲ್ಲದೇ ನಾದ ಸುಧಾ ವಿದ್ಯಾರ್ಥಿಗಳು ವಿವಿಧ ಸಂಗೀತ ಹಾಗೂ ನೃತ್ಯದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುತ್ತಾ ಬಂದಿದ್ದಾರೆ.
ಸಂಗೀತದಲ್ಲಿ ಸತತ ಅಭ್ಯಾಸ ಹಾಗೂ ಸಮರ್ಪಣಾ ಭಾವನೆ ಬೆಳೆಸಿಕೊಂಡರೆ ಉನ್ನತಮಟ್ಟಕ್ಕೆ ತಲುಪಲು ಸಾಧ್ಯ ಆಗುತ್ತದೆ ಎಂದು ಡಾ.ಸತ್ಯನಾರಾಯಣ ಅವರು ಅಭಿಪ್ರಾಯಪಡುತ್ತಾರೆ.
ನಾದಸುಧಾ ಸುಗಮ ಸಂಗೀತ ಶಾಲೆಯ 16 ನೇ ಸಂಸ್ಥಾಪನಾ ದಿನಾಚರಣೆ
ಬೆಳಗಾವಿ ನಾದಸುಧಾ ಸುಗಮ ಸಂಗೀತ ಶಾಲೆಯ 16 ನೇ ಸಂಸ್ಥಾಪನಾ ದಿನಾಚರಣೆ ಆ.10 ರಂದು ಸಂಜೆ 5:30ಕ್ಕೆ ನಗರದ ಮಂಗಳವಾರಪೇಟೆಯ ಪಿಂಕ್ ವರಾಂಡ ಪಕ್ಕದ ಟಿಳಕವಾಡಿ ಶಾಲೆ ಆವರಣದಲ್ಲಿ ನಡೆಯಲಿದೆ.
ಸಾಹಿತಿ, ಪತ್ರಕರ್ತ, ಕವಿ ಎಲ್.ಎಸ್. ಶಾಸ್ತ್ರಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿರುವರು ಎಂದು ನಾದಸುಧಾ ಸಂಗೀತ ಶಾಲೆಯ ಸಂಸ್ಥಾಪಕ ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
