ಬೆಳಗಾವಿ : ಜನ ಜೀವಾಳ ಜಾಲ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಶ್ರೀ ಚನ್ನ ಬಸವೇಶ್ವರರು ಲಿಂಗ ಪೂಜೆ ಮಾಡಿದ ಸ್ಥಳ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸುವ ಬೇಡಿಕೆ ಗ್ರಾಮದ ಜನತೆಯದ್ದು.
12 ನೇ ಶತಮಾನದಲ್ಲಿ ಶ್ರೀ ಚನ್ನ ಬಸವೇಶ್ವರರು ಉಳವಿ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ
ಲಿಂಗನಮಠ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಮಾಡಿ ಲಿಂಗ ಪೂಜೆ ಮಾಡಿ ಉಳವಿ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು. ಅಂದಿನಿಂದ ಈ ಗ್ರಾಮಕ್ಕೆ
ಲಿಂಗನಮಠ ಎಂಬ ಹೆಸರು ಬಂದಿತು, ಇದೊಂದು ಪುಣ್ಯ ಸ್ಥಳವಾಗಿದೆ ಹಾಗೂ ಶ್ರೀ ಚನ್ನ ಬಸವೇಶ್ವರರರು ಲಿಂಗ ಪೂಜೆ ಮಾಡುವ ಮುಂಚಿತವಾಗಿ ಸ್ನಾನ ಮಾಡಿದ ಬಾವಿಯು ಇನ್ನೂವರೆಗೂ ಲಿಂಗನಮಠ ಗ್ರಾಮದಲ್ಲಿ ಕಾಣಬಹುದು. ಆಗಿನ ಕಾಲದಲ್ಲಿ ಸ್ನಾನ ಮಾಡಲು ಉಪಯೋಗಿಸಿದ, ಬಾವಿಯನ್ನು ಅಭಿವೃದ್ಧಿಪಡಿಸಿ ಬಾವಿಯ ಸುತ್ತಲೂ ಉದ್ಯಾನವನ ನಿರ್ಮಾಣ ಮಾಡಲು ಹಾಗೂ ಉದ್ಯಾನವನದಲ್ಲಿ ಶ್ರೀ ಚನ್ನಬಸವೇಶ್ವರರ ಮೂರ್ತಿಯನ್ನು ಅನಾವರಣ ಮಾಡುವಂತೆ ಹಾಗೂ ಅಂದಾಜು ರೂ. 10 ಲಕ್ಷ ಬೇಡಿಕೆಯನ್ನು ಗ್ರಾಮಸ್ಥರು ಸರಕಾರ ಮುಂದಿಟ್ಟಿದ್ದರು. ಆದರೆ, ಅಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ರವಾನಿಸಿದ ಪತ್ರದಲ್ಲಿ ಕೇವಲ ರೂ.10.00 ಗಳನ್ನು ಮಂಜೂರು ಮಾಡುವಂತೆ ಉಲ್ಲೇಖಿಸಿರುವುದು ಕಂಡುಬಂದಿದೆ !
ಸರಕಾರದ ಅಧಿಕಾರಿಗಳು ಯಾವುದೇ ತಪ್ಪಿಲ್ಲದೆ ಸರಕಾರಕ್ಕೆ ಜನತೆಯ ಆಗ್ರಹವನ್ನು ಮುಂದಿಡಬೇಕು. ಆದರೆ, ಇಲ್ಲಿ ಕಾಟಾಚಾರಕ್ಕೆಂಬಂತೆ ಪತ್ರವನ್ನು ಬರೆದು ಮುಗಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. 10 ಲಕ್ಷ ರೂಪಾಯಿ ಬದಲು ಹತ್ತೇ ರೂಪಾಯಿ ಎಂದು ಬರೆದಿರುವ ದೊಡ್ಡ ಲೋಪ ಕಂಡುಬಂದರು ಅಧಿಕಾರಿಗಳು ಗಮನಹರಿಸದೆ ಇರುವುದು ಅವರ ಬೇಜವಾಬ್ದಾರಿಗೆ ಸಾಕ್ಷಿ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಒಮ್ಮೆ ಪತ್ರ ಬರೆದರೆ ಮುಗಿಯಿತು, ತಮ್ಮ ಕೆಲಸವಾಯಿತು ಎಂಬಂತೆ ಅಧಿಕಾರಿಗಳು ಇಲ್ಲಿ ನಡೆದುಕೊಂಡಿರುವುದು ಸ್ಪಷ್ಟವಾದಂತಿದೆ. ಈಗಲಾದರೂ ಈ ಲೋಪವನ್ನು ಸರಿಪಡಿಸಲಿ ಎನ್ನುವುದು ಜನತೆಯ ಆಗ್ರಹವಾಗಿದೆ.