ನವದೆಹಲಿ: ಮೇ ತಿಂಗಳಿನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ. ಇದರೊಂದಿಗೆ ಆಗಾಗ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.
‘ಉತ್ತರ ಕರ್ನಾಟಕ, ಗುಜರಾತ್, ಒಡಿಶಾ, ಛತ್ತೀಸಗಢ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಹಲವು ಪ್ರದೇಶಗಳಲ್ಲಿ ಬಿಸಿಗಾಳಿಯ ದಿನಗಳು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿವೆ’ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯಂಜಯ ಮಹಾಪಾತ್ರ ಮಾಹಿತಿ ನೀಡಿದರು.
‘ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಬಿಸಿಗಾಳಿಯ ದಿನಗಳು ಸಾಮಾನ್ಯಕ್ಕಿಂತ ಒಂದರಿಂದ ನಾಲ್ಕು ದಿನಗಳವರೆಗೆ ಹೆಚ್ಚಾಗಿರಲಿವೆ’ ಎಂದರು.
ಭಾರತದ ವಾಯುವ್ಯ, ಕೇಂದ್ರ ಮತ್ತು ಈಶಾನ್ಯ ಭಾಗದ ಕೆಲ ಪ್ರದೇಶಗಳನ್ನು ಹೊರತುಪಡಿಸಿ, ಹಲವೆಡೆ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದ ಮಳೆಯಾಗಲಿದೆ ಎಂದು ಅವರು ತಿಳಿಸಿದರು.