ಹೈದ್ರಾಬಾದ್ :
ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಖ್ಯಾತ ನಟ ರಜನಿಕಾಂತ್ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಸುದ್ದಿಯೊಂದು ಭಾರೀ ಸದ್ದು ಮಾಡಿದೆ.
ತಮಿಳುನಾಡು ಮತ್ತು ತೆಲಂಗಾಣದಲ್ಲಿ ರಜನಿ ಬಹುದೊಡ್ಡ ಜನಬೆಂಬಲ ಹೊಂದಿದ್ದಾರೆ. ಇದನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯಪಾಲರಾಗುವಂತೆ ಬಿಜೆಪಿ ರಜನಿಗೆ ಆಫರ್ ನೀಡಿದೆ. ಇದನ್ನು ಸ್ವತಃ ರಜನಿ ಕೂಡಾ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ರಜನಿ ಒಪ್ಪಿದರೆ ಯಾವುದೇ ಸಂದರ್ಭದಲ್ಲಿ ಅವರ ನೇಮಕ ಆಗಬಹುದು ಎಂಬ ಸುದ್ದಿ ಹಬ್ಬಿದೆ.
ರಜನಿ ರಾಜ್ಯಪಾಲರಾದರೆ ತೆಲಂಗಾಣ ಮತ್ತು ತಮಿಳುನಾಡು ಎರಡೂ ಕಡೆ ಬಿಜೆಪಿಗೆ ಲಾಭವಾಗಲಿದೆ ಎಂಬುದು ಪಕ್ಷದ ಉದ್ದೇಶ. ಇತ್ತೀಚೆಗಷ್ಟೇ ರಜನಿ ಅವರ ಸೋದರ ಸತ್ಯನಾರಾಯಣ ರಾವ್ ಅವರು ‘ರಜನೀಕಾಂತ್ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶಿಸದೇ ಇರಬಹುದು. ಆದರೆ ಖಂಡಿತ ಅವರು ರಾಜ್ಯದ ರಾಜ್ಯಪಾಲರಾಗುತ್ತಾರೆ’ ಎಂದು ಹೇಳಿದ್ದರು. ಈ ಹೇಳಿಕೆ ಇಂಥದ್ದೊಂದು ಸಾಧ್ಯತೆಯನ್ನು ಮತ್ತಷ್ಟು ದಟ್ಟವಾಗಿಸಿದೆ.