ಬೆಂಗಳೂರು : ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಇದೀಗ ಪಕ್ಷಾಂತರ ಜೋರಾಗಿದೆ. ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಮನೋಹರ ತಹಸೀಲ್ದಾರ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಹಾನಗಲ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಇದೀಗ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ತಮಗೆ ಆದ ಅನ್ಯಾಯದ ವಿರುದ್ದ ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಬಿಜೆಪಿ ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚಸ್ಸುಳ್ಳ ನಾಯಕರನ್ನು ಸೆಳೆಯಲು ಮುಂದಾಗಿದೆ. ಹೀಗಾಗಿ ತಹಸೀಲ್ದಾರ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಪಕ್ಷ ಸೇರ್ಪಡೆಗೊಂಡ ನಂತರ ಮಾತನಾಡಿದ ತಹಸೀಲ್ದಾರ್ ಅವರು ಇಂದು ಬಹಳ ಸಂತೋಷದಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಇದಕ್ಕೆ ಮುಖ್ಯ ಕಾರಣ ಬಸವರಾಜ ಬೊಮ್ಮಾಯಿ. ಅವರು ನನಗೆ ಆಗಿರುವ ಅನ್ಯಾಯ ಕಂಡು ನೀವು ಅಲ್ಲಿರುವುದು ಸರಿಯಲ್ಲ. ನಿಷ್ಠೆಯಿಂದ 45 ವರ್ಷ ಕಾಂಗ್ರೆಸ್ ನಲ್ಲಿದ್ದರೂ ನಿಮ್ಮನ್ನು ಊಟ ಮಾಡಿ ಎಲೆಯನ್ನು ಬಿಸಾಡಿದ ಹಾಗೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ನಾನು ಹಾಲಿ ಶಾಸಕನಾಗಿದ್ದರೂ ನನಗೆ ಟಿಕೆಟ್ ಕೊಡಲಿಲ್ಲ. ನಮ್ಮ ತಾಲೂಕಿನವರಿಗೆ ಟಿಕೆಟ್ ಕೊಟ್ಟಿದ್ದರೂ ಬೇಸರ ಇರಲಿಲ್ಲ. ಆದರೆ ಹೊರಗಿನಿಂದ ಬಂದು ನಿಲ್ಲಿಸಿದರು. ಈ ಹಿಂದೆ ಶ್ರೀನಿವಾಸ ಮಾನೆ ಪರವಾಗಿ ಕೆಲಸ ಮಾಡಿದೆ. ಅವರು ಸೋತರು. ನಾವೇ ಸೋಲಿಸಿದೆ ಅಂತ ನಮ್ಮ ಮೇಲೆ ಗೂಬೆ ಕೂರಿಸಿದರು. ನನ್ನ ಮಗ ಜಿಲ್ಲಾ ಪಂಚಾಯಿತಿ ಸದಸ್ಯಯಾಗಿದ್ದ. ಅವನನ್ನು ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಿ ಎಂಬ ಚರ್ಚೆ ಕೇಳಿ ಬಂತು. ಒಂದೇ ಮನೆತನಕ್ಕೆ ಎಲ್ಲಾ ಕೊಟ್ಟಂತೆ ಆಗಲಿದೆ ಬೇಡ ಅಂತ ಹೇಳಿದರು. ಪಕ್ಷದ ವರಿಷ್ಠರು ನಿರ್ದೇಶನ ಕೊಟ್ಟರೂ ಬೇರೆಯವರನ್ನು ಅಭ್ಯರ್ಥಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.