ಶಿರಸಿ: ಮಲೆನಾಡು ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಮಹತ್ವದ ರೈಲು ಯೋಜನೆ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಜನವರಿ 16ರಂದು ಈ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸಲು ಟೆಂಡರ್ ನೀಡಲಾಗಿದೆ. ಈ ಹೊಸ ರೈಲು ಮಾರ್ಗ 167 ಕಿ. ಮೀ. ಎಂದು ಅಂದಾಜಿಸಲಾಗಿದೆ. ತಾಳಗುಪ್ಪ ಶಿವಮೊಗ್ಗ ಜಿಲ್ಲೆಯ ಕೊನೆಯ ರೈಲು ನಿಲ್ದಾಣವಾಗಿದೆ. ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ನೂತನ ರೈಲು ಮಾರ್ಗ ನಿರ್ಮಾಣವಾಗಲಿದೆ.
ಉತ್ತರ ಕನ್ನಡ ಸಂಸದ, ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಯೋಜನೆ ಇದಾಗಿದ್ದು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳನ್ನು ಈ ಮಾರ್ಗ ಸಂಪರ್ಕಿಸಲಿದೆ.
ಸಂಸದರ ಪೋಸ್ಟ್: ತಮ್ಮ ಪೋಸ್ಟ್ನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ‘ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸಿ ವಿಸ್ತೃತ ವರದಿಯನ್ನು ನೀಡಲು ನೈಋತ್ಯ ರೈಲ್ವೆ ಹೈದ್ರಾಬಾದ್ ಮೂಲದ ಕಂಪನಿಗೆ ದಿನಾಂಕ 16-01-2025ರಂದು ಗುತ್ತಿಗೆ ನೀಡಿದ್ದು ಸರ್ವೆಕಾರ್ಯ ನಡೆಸಿ, ಒಂದು ವರ್ಷದ ಅವಧಿ ಒಳಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ನೀಡಬೇಕೆಂದು ಸೂಚಿಸಿರುತ್ತಾರೆ’ ಎಂದು ಹೇಳಿದ್ದಾರೆ.
ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ
ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ
‘ಈಗಾಗಲೇ ನನ್ನ ಪ್ರಯತ್ನದಿಂದ ಮಾರ್ಚ್ 15, 2024ಕ್ಕೆ 3.95 ಕೋಟಿ ಮಂಜೂರಾಗಿದೆ. ಅದರಂತೆ ದಿನಾಂಕ 8-12-2024ರಂದು ಹುಬ್ಬಳ್ಳಿಯ ನೈಋತ್ಯ ವಲಯ ರೈಲ್ವೆ ಭವನದಲ್ಲಿ ನಡೆದ ಸಭೆಯಲ್ಲಿ ಮಾನ್ಯ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣರವರಲ್ಲಿ ಶೀಘ್ರವಾಗಿ ವಿಸ್ತೃತ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.
You May Also Like
ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಒಪ್ಪಿಗೆ ಸಿಕ್ಕಿಲ್ಲ
ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಒಪ್ಪಿಗೆ ಸಿಕ್ಕಿಲ್ಲ
ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಲು ಹೊಸ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಬಗ್ಗೆ 2018ರಿಂದ ಚರ್ಚೆಗಳು ನಡೆಯುತ್ತಿವೆ. ತಾಳಗುಪ್ಪದಿಂದ ಬೆಂಗಳೂರು, ಮೈಸೂರಿಗೆ ಹಲವು ರೈಲುಗಳು ಸಂಚಾರವನ್ನು ನಡೆಸುತ್ತದೆ. ಇದು ಶಿವಮೊಗ್ಗ ಜಿಲ್ಲೆಯ ಕೊನೆಯ ರೈಲು ನಿಲ್ದಾಣ.
ಉತ್ತರ ಕನ್ನಡ ಭಾಗದ ಪ್ರಯಾಣಿಕರು ಬೆಂಗಳೂರು, ಮೈಸೂರಿನಿಂದ ರೈಲಿನಲ್ಲಿ ತಾಳಗುಪ್ಪ ತಲುಪಿ ಅಲ್ಲಿಂದ ಬಸ್ ಮೂಲಕ ಮುಂದೆ ಸಾಗಬೇಕಿದೆ. ತಾಳಗುಪ್ಪದಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಮಾರ್ಗ ನಿರ್ಮಾಣವಾದರೆ ಮಲೆನಾಡು-ಉತ್ತರ ಕರ್ನಾಟಕ ಸಂಪರ್ಕಿಸಲು ಸಹಾಯಕವಾಗುತ್ತದೆ.
ಈ ಮಾರ್ಗ ನಿರ್ಮಾಣದ ಕುರಿತು ನೈಋತ್ಯ ರೈಲ್ವೆ ಈಗಾಗಲೇ ಪ್ರಾಥಮಿಕ ಹಂತದಲ್ಲಿ ಇಂಜಿನಿಯರಿಂಗ್ ಕಮ್ ಟ್ರಾಫಿಕ್ ಸರ್ವೇಯನ್ನು ನಡೆಸಿದೆ. ಡ್ರೋನ್ ಮೂಲಕ ಮತ್ತು ರೈಲು ಮಾರ್ಗ ಹಾದು ಹೋಗುವ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಈ ಮಾರ್ಗದ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ನೂತನ ರೈಲು ಮಾರ್ಗದ ನಕ್ಷೆ, ಯೋಜನೆಗೆ ಬೇಕಾಗುವ ಅಂದಾಜು ಭೂಮಿ, ನಿರ್ಮಾಣ ಮಾಡಬೇಕಾದ ಸೇತುವೆಗಳು ಮುಂತಾದ ಅಂಶಗಳ ಕುರಿತು ಇಂಜಿನಿಯರಿಂಗ್ ಸಮೀಕ್ಷೆ ನಡೆಸಲಾಗಿದೆ. ಎಷ್ಟು ಪ್ರಯಾಣಿಕರು ಸಂಚಾರ ನಡೆಸಬಹುದು, ಸರಕು ಸೇವೆ ರೈಲುಗಳ ಸಂಚಾರಕ್ಕೆ ಅನುಕೂಲವಿದೆಯೇ? ಎದು ಟ್ರಾಫಿಕ್ ಸಮೀಕ್ಷೆಯನ್ನು ಮಾಡಲಾಗಿದೆ.
ಈ ಮಾರ್ಗ ನಿರ್ಮಾಣ ಮಾಡಿದರೆ ಅದಕ್ಕೆ ಎಷ್ಟು ವೆಚ್ಚವಾಗಬಹುದು? ಎಂದು ಇಲಾಖೆ ಅಂದಾಜಿಸಲು ಅಂತಿಮ ಸ್ಥಳ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಮೀಕ್ಷೆಯ ಆಧಾರದ ಮೇಲೆ ಭೂ ಸ್ವಾಧೀನದ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ನಿಲ್ದಾಣಗಳ ಮಾಹಿತಿ: ನೂತನ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ 167 ಕಿ. ಮೀ. ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಕವಚೂರ, ಸಿದ್ದಾಪುರ, ಮಂಡಿಕೊಪ್ಪ, ತೆಳಗುಂಡ್ಲಾ, ಬಿದ್ರಳ್ಳಿ, ಶಿರಸಿ, ಅಂಚಳ್ಳಿ, ಹರಗನಹಳ್ಳಿ, ಪಾಳಾ, ಸಿದ್ದನಕೊಪ್ಪ, ಮುಂಡಗೋಡ, ಹುನಗುಂದ, ತಡಸ, ಬೆಳಗಲಿ ಮೂಲಕ ಸಾಗಲಿದೆ ಎಂಬ ಮಾಹಿತಿ ಇದೆ.
ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಕನಸು ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗ. ವಿಧಾನಸಭೆ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಯೋಜನೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು.