ಬೆಳಗಾವಿ : ಬೆಳಗಾವಿಯ ಸುಪ್ರಸಿದ್ದ ಹಿಂಡಲಗಾ ಮಿಲಿಟರಿ ವಿನಾಯಕ ಮಂದಿರ ಯಾರಿಗೆ ಗೊತ್ತಿಲ್ಲ. ರಸ್ತೆಗೆ ತಾಗಿಕೊಂಡೇ ಇರುವ ಈ ವಿನಾಯಕ ಮಂದಿರದ ಕಾರಣಿಕ ಬಹು ದೊಡ್ಡದಿದೆ.
ಸಂಕಷ್ಟಿ ಸೇರಿದಂತೆ ವಿಶೇಷ ದಿನಗಳಂದು ಈ ಮಂದಿರದಲ್ಲಿ ಜನಜಂಗುಳಿ ನೆರೆದಿರುವುದು ಸರ್ವೇಸಾಮಾನ್ಯ. ಆದರೆ ಈ ಮಂದಿರದಲ್ಲಿ ಇದೀಗ ಅವ್ಯವಸ್ಥೆ ಮಾಡಲಾಗಿದೆ. ಹಿಂದಿನ ಗೇಟ್ ಕಳೆದ ಎರಡು ಮೂರು ವರ್ಷಗಳಿಂದ ಬಂದ್ ಇರುತ್ತದೆ. ಹೀಗಾಗಿ ವಯಸ್ಕರಿಗೆ,ಹೆಂಗಸರಿಗೆ ಮುಂದುಗಡೆ ಇರುವ ಪ್ರವೇಶದ್ವಾರದ ಮೂಲಕ ಮಂದಿರಕ್ಕೆ ಹೋಗಲು ಆಗುತ್ತಿಲ್ಲ. ಕಾರಣ ವಿಪರೀತ ಟ್ರಾಫಿಕ್ ಸಮಸ್ಯೆ,ಇಕ್ಕಟ್ಟಾದ ರಸ್ತೆ, ಹದಗೆಟ್ಟ ರಸ್ತೆ ಎಂದೇ ಹೇಳಬೇಕು.
ಹಿಂದೂಗಳ ಆರಾಧ್ಯ ದೇವ ಶ್ರೀ ಗಣೇಶ. ಗಣೇಶ ಸಾರ್ವಜನಿಕರ ಸೊತ್ತು. ಆ ಮಂದಿರಕ್ಕೆ ಹಿಂದಿನ ಗೇಟಿನಿಂದ ಪ್ರವೇಶ ನಿಷೇಧಿಸಲಾಗಿದೆ.ಇದಕ್ಕೆ ಯಾವ ಕಾರಣ ಕೊಟ್ಟರೂ ಸಮರ್ಥನೀಯ ಆಗಲಾರದು. ಕಾರಣ ಈ ಭಾಗದ ಕಾರ್ಪೊರೇಟರ್,ಎಂ.ಎಲ್. ಎ,ಮತ್ತು ಎಂಪಿ, ಸಚಿವರು ಎಲ್ಲರೂ ಪ್ರಯತ್ನ ಮಾಡಿ ಈ ಮಂದಿರದ ಹಿಂದಿನ ಗೇಟನ್ನು ತೆರೆಯಿಸಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಹಿರಿಯ ನಾಗರಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಹಿರಿಯ ನಾಗರಿಕರು ಮತ್ತು ಮಹಿಳೆಯರ ಸಮಸ್ಯೆಗೆ ಆಲಿಸಿ ಮಂದಿರದ ಹಿಂದಿನ ಗೇಟ್ ತೆರೆದು ಸುಲಲಿತವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.