ಬೆಳಗಾವಿ (ಚನ್ನಮ್ಮ ಕಿತ್ತೂರು) :
ಈ ಬಾರಿ ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟು ಪಂಚಾಯಿತಿಯ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ‘ಶುದ್ಧ ಕುಡಿಯುವ ನೀರು ಪೂರೈಕೆಯ ಟಾಸ್ಕ್ ಫೋರ್ಸ್’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳ ಹೊಣೆಯಾಗಿದೆ. ಅದನ್ನು ಸೂಕ್ತವಾಗಿ ನಿರ್ವಹಿಸುವ ಮೂಲಕ ಎಲ್ಲಿಯೂ ನೀರಿನ ಅಭಾವ ತಲೆದೋರದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಆಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕ, ಕುಡಿಯುವ ನೀರಿನ ಸಂಸ್ಕರಣಾ ಘಟಕಗಳನ್ನು ಸಮರ್ಪಕವಾಗಿ ಕಾಲಕಾಲಕ್ಕೆ ದುರಸ್ತಿಗೊಳಿಸಬೇಕು ಹಾಗೂ ಅವುಗಳ ಸುತ್ತಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ನೀರಿನ ಸಂಸ್ಕರಣಾ ಘಟಕದ ಪ್ರಮುಖ ಭಾಗಗಳಾದ ಫಿಲ್ಟರ್,ಕ್ಲೋರಿನೀಕರಣ ಬಾಟಲ್ ಇತ್ಯಾದಿಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕು ಮತ್ತು ನೀರಿನ ಸಂಸ್ಕರಣಾ ಘಟಕವನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರುವ ಬಗ್ಗೆ ಮೇಲಿಂದ ಮೇಲೆ ಪರಿಶೀಲಿಸುತ್ತಿರಬೇಕು. ಪ್ರತಿದಿನ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ನೀರು ಪೂರೈಕೆ ಆಗುತ್ತಿರು ಬಗ್ಗೆ ತಾಲೂಕು ಪಂಚಾಯಿತಿಗೆ ಮಾಹಿತಿ ಒದಗಿಸಬೇಕು ಎಂದರು.
ಸಾರ್ವತ್ರಿಕ ವಿಧಾನ ಸಭೆ ಚುನಾವಣೆ ಇರುವುದರಿಂದ ಎಲ್ಲರೂ ಚುನಾವಣೆ ಕರ್ತವ್ಯವನ್ನು ಆದ್ಯತೆ ಮೇರೆಗೆ ಮಾಡುವುದರ ಜತೆಗೆ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನ ಜಾಗೃತಿ ಮೂಡಿಸುವ ಮೂಲಕ ಗ್ರಾಪಂ ವ್ಯಾಪ್ತಿಯ ಊರುಗಳಲ್ಲಿ ಹೆಚ್ಚಿನ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ರವೀಂದ್ರ ಹಾದಿಮನಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಬೈಲಹೊಂಗಲ ಉಪವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ಎಸ್.ಕೆ. ಮುಕಸಜ್ಜಿ, ಕಿತ್ತೂರ ಹೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಕೆ.ಹಿರೇಮಠ, ಸಹಾಯಕ ನಿರ್ದೇಶಕರಾದ ಸುರೇಶ ನಾಗೋಜಿ, ಲಿಂಗರಾಜ ಹಲಕರ್ಣಿಮಠ, ಗ್ರಾಪಂ ಅಧಿವೃದ್ಧಿ ಅಧಿಕಾರಿಗಳು ಹಾಗೂ ತಾ.ಪಂ. ಹಾಗೂ ಗ್ರಾ.ಪಂ ಸಿಬ್ಬಂದಿ ಪಾಲ್ಗೊಂಡಿದ್ದರು.