ಅಹಮದಾಬಾದ್ : ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಉಳಿಸಿಕೊಂಡ ಮೊದಲ ತಂಡ ಮತ್ತು ಮೂರನೇ ಬಾರಿಗೆ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 255-5 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 159 ರನ್ಗಳಿಗೆ ಆಲೌಟ್ ಆಯಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತದ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ನಿಜವಾಯಿತು.
ಬ್ಯಾಟಿಂಗ್ ಅಬ್ಬರ: ಸಂಜು ಸ್ಯಾಮ್ಸನ್ ಮಿಂಚು
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಅಬ್ಬರದ ಆಟ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ಗಳ ನೆರವಿನಿಂದ 89 ರನ್ ಸಿಡಿಸಿದರು. ಮತ್ತೊಬ್ಬ ಆರಂಭಿಕ ಅಭಿಷೇಕ ಶರ್ಮಾ (21 ಎಸೆತಗಳಲ್ಲಿ 52) ಮತ್ತು ಇಶಾನ್ ಕಿಶನ್ (25 ಎಸೆತಗಳಲ್ಲಿ 54) ಸ್ಫೋಟಕ ಅರ್ಧಶತಕಗಳನ್ನು ಬಾರಿಸಿದರು. ಅಭಿಷೇಕ ಶರ್ಮಾ ಅವರು ರಚಿನ್ ರವೀಂದ್ರ ಎಸೆತದಲ್ಲಿ ಔಟಾಗುವ ಮೊದಲು ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು.
ಭಾರತ 14 ಓವರ್ಗಳ ಮುಕ್ತಾಯಕ್ಕೆ 191-1 ರನ್ ಗಳಿಸಿತ್ತು, ಸ್ಯಾಮ್ಸನ್ ಮತ್ತು ಕಿಶನ್ 105 ರನ್ಗಳ ಜೊತೆಯಾಟದಲ್ಲಿ ನ್ಯೂಜಿಲೆಂಡ್ ಬೌಲರ್ಗಳನ್ನು ಚಚ್ಚಿದರು. ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಗಳಿಸಿ, ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು. ಕಿಶನ್ 25 ಎಸೆತಗಳಲ್ಲಿ 54 ರನ್ ಗಳಿಸಿ, ಟೂರ್ನಿಯಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಆ ಸಮಯದಲ್ಲಿ ಭಾರತ 280 ರನ್ ಗಳಿಸುವ ಸೂಚನೆ ನೀಡಿತ್ತು.
ಆದರೆ ಜಿಮ್ಮಿ ನೀಶಮ್ 16ನೇ ಓವರ್ನಲ್ಲಿ ಕೇವಲ 1 ರನ್ ನೀಡಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ ಯಾದವ್ (0) ಅವರ ವಿಕೆಟ್ ಪಡೆದು ಭಾರತಕ್ಕೆ ಶಾಕ್ ನೀಡಿದರು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 18 ರನ್ ಗಳಿಸಿದರು, ಆದರೆ ಭಾರತದ ಬ್ಯಾಟಿಂಗ್ ಬಲಕ್ಕೆ ಸಾಕ್ಷಿಯಾಗಿದ್ದು ಶಿವಂ ದುಬೆ ಅವರ ಬಿರುಗಾಳಿ ಬ್ಯಾಟಿಂಗ್. ಅವರು ಕೇವಲ ಎಂಟು ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 26* ರನ್ ಗಳಿಸಿದರು. ನೀಶಮ್ 20 ನೇ ಓವರ್ನಲ್ಲಿ ಅವರು 24 ರನ್ಗಳನ್ನು ನೀಡಿದರು.ಅಂತಿಮವಾಗಿ ಭಾರತವು 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು.
ಮೊದಲ ಎರಡು ಓವರ್ಗಳು ಅವರಿಗೆ 2-13 ರನ್ ನೀಡಿದ್ದ ಅವರು, ಅಂತಿಮವಾಗಿ 4-0-46-3 ರನ್ ನೀಡಿದರು. ಲಾಕಿ ಫರ್ಗುಸನ್ ಅವರ ಎರಡು ಓವರ್ಗಳಲ್ಲಿ 48 ರನ್ ನೀಡಿದರು. ಜಾಕೋಬ್ ಡಫಿ (3-0-42-0) ಮತ್ತು ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಆಡುವ ಮ್ಯಾಟ್ ಹೆನ್ರಿ 4-0-49-1 ಹೆಚ್ಚು ಪರಿಣಾಮಕಾರಿಯಾಗಲಿಲ್ಲ.
ಆರಂಭದಲ್ಲೇ ನ್ಯೂಜಿಲೆಂಡ್ ವಿಕೆಟ್ ಪತನ
ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಟಿಮ್ ಸೀಫರ್ಟ್ (52 ರನ್) ಹೊರತುಪಡಿಸಿ ಅಗ್ರ ಕ್ರಮಾಂಕದ ಉಳಿದ ನಾಲ್ವರು ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಡ್ಯಾರಿಲ್ ಮಿಚೆಲ್ (17) ಆರಂಭದಲ್ಲಿ ಎರಡು ಸಿಕ್ಸರ್ ಬಾರಿಸಿದರೂ, ಅಷ್ಟರಲ್ಲಾಗಲೇ ಬೇಕಾದ ರನ್ ರೇಟ್ ಪ್ರತಿ ಓವರ್ಗೆ 17ಕ್ಕೆ ಏರಿತ್ತು. ನಾಯಕ ಮಿಚೆಲ್ ಸ್ಯಾಂಟ್ನರ್ (43 ರನ್) ಹೋರಾಟ ನಡೆಸಿದರೂ ಅದು ಸೋಲಿನ ಅಂತರವನ್ನು ಕಡಿಮೆ ಮಾಡಲಷ್ಟೇ ಸಾಧ್ಯವಾಯಿತು. ಅಂತಿಮವಾಗಿ ನ್ಯೂಜಿಲೆಂಡ್ ತಂಡವು 159 ರನ್ಗಳಿಗೆ ಆಲೌಟ್ ಆಗುವ ಮೂಲಕ 96 ರನ್ಗಳಿಂದ ಸೋಲನುಭವಿಸಿತು.
ಜಸ್ಪ್ರಿತ್ ಬುಮ್ರಾ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಅವರು 3 ಓವರ್ಗಳಲ್ಲಿ 27 ರನ್ ನೀಡಿ ಫಿನ್ ಅಲೆನ್ ಮತ್ತು ಗ್ಲೆನ್ ಫಿಲಿಪ್ಸ್ ಸೇರಿದಂತೆ 3 ಪ್ರಮುಖ ವಿಕೆಟ್ ಪಡೆದರು. ವರುಣ ಚಕ್ರವರ್ತಿ ಹಾಗೂ ಅಭಿಷೇಕ ಶರ್ಮಾ ತಲಾ ಒಂದು ವಿಕೆಟ್ ಪಡೆದರು.


