ಬೆಳಗಾವಿ :
ಜಾಗತಿಕ ತಾಪಮಾನಕ್ಕೆ ಮನುಷ್ಯ ಎಸಗುತ್ತಿರುವ ಮಿತಿಮೀರಿದ ಚಟುವಟಿಕೆಗಳೇ ನೇರ ಕಾರಣ ಎಂದು ಬೆಳಗಾವಿಯ ಖ್ಯಾತ ಪರಿಸರವಾದಿ ಶಿವಾಜಿ ಕಾಗಣೇಕರ ಕಳವಳ ವ್ಯಕ್ತಪಡಿಸಿದರು.
ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಗುರುವಾರ ಸಮಾಜಶಾಸ್ತ್ರ ವಿಭಾಗ ಏರ್ಪಡಿಸಿದ್ದ ಸಂಪೋಷಿತ ಪರಿಸರ ಅಭಿವೃದ್ದಿ ಎಂಬ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಮಾನವ ತನ್ನ ಉದ್ದೇಶಗಳ ಈಡೇರಿಕೆಗೆ ಪರಿಸರದ ಮೇಲೆ ಇನ್ನಿಲ್ಲದಂತೆ ದಾಳಿ ನಡೆಸುತ್ತಿದ್ದಾನೆ. ಅದರಿಂದಾಗಿ ಇಂದು ಪರಿಸರ ಇನ್ನಿಲ್ಲದಂತೆ ಹದಗೆಡುತ್ತಿದೆ. ಪರಿಸರದ ಮೇಲೆ ಮೊದಲು ಜನಿಸಿದ್ದು ಕ್ರಿಮಿಕೀಟಗಳು, ವನ ಸಂಪತ್ತು. ಅನಂತರವೇ ಮಾನವ ಹುಟ್ಟಿದ. ಆದರೆ ಇಂದು ಈ ಮಾನವನಿಂದ ಪರಿಸರದಲ್ಲಿ ಜಲ ಮಾಲಿನ್ಯ, ವಾಯುಮಾಲಿನ್ಯ ಸೇರಿದಂತೆ ಹತ್ತು ಹಲವು ಮಾಲಿನ್ಯ ಆಗುತ್ತಿದೆ. ಮಾನವನಿಂದ ಆಗುತ್ತಿರುವ ಅವ್ಯಾಹತ ಮಾಲಿನ್ಯದಿಂದಾಗಿ ಜಗತ್ತಿನ ತಾಪಮಾನ ಅತಿಯಾಗಿ ಏರಿಕೆ ಆಗುತ್ತಿದೆ. ಜಾಗತಿಕ ತಾಪಮಾನಕ್ಕೆ ಮಾನವನೇ ನೇರ ಕಾರಣ. ಮಾನವನ ಚಟುವಟಿಕೆಗಳು ಇಡೀ ಜಗತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಗಾಂಧೀಜಿಯವರು ಬರೆದ ಹಿಂದ್ ಸ್ವರಾಜ್ ಎಂಬ ಗ್ರಂಥದಲ್ಲಿ ಮಾನವನ ಐಷಾರಾಮಿ ಜೀವನಕ್ಕಿಂತ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿರುವುದನ್ನು ಅವರು ಉಲ್ಲೇಖಿಸಿದರು. ಸೌರಶಕ್ತಿಯ ಸದುಪಯೋಗ ಪಡೆಯುವ ಮೂಲಕ ನಾವು ಹಲವಾರು ಉಪಯೋಗ ಪಡೆಯಬಹುದು. ಆಧುನಿಕವಾಗಿ ನಾವು ಬಳಸುವ ವಾಹನಗಳ ಬಳಕೆಗೆ ಕಡಿವಾಣ ಹಾಕಬೇಕು. ತೀರಾ ಅವಶ್ಯಕತೆಗೆ ಮಾತ್ರ ವಾಹನ ಬಳಸಬೇಕು ಎಂದು ಅವರು ತಿಳಿಹೇಳಿದರು.
ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಹೆಚ್ಚಾಗಿ ಅನುಸರಿಸುತ್ತಿದ್ದೇವೆ. ಅವುಗಳ ಅನುಕರಣೆಯು ಸಹ ನಮ್ಮ ಪರಿಸರದ ಮೇಲೆ ಋಣಾತ್ಮಕ ಪ್ರಭಾವ ಬೀರಿ ತಾಪಮಾನ ಹೆಚ್ಚಳ ಸೇರಿದಂತೆ ಇನ್ನು ಹಲವು ಸಮಸ್ಯೆ ಉದ್ಭವವಾಗುತ್ತಿದೆ ಎಂದು ಅವರು ಹೇಳಿದರು.
ಇಂದಿನ ಯುವಕರು ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯಬೇಕಾದ ಅವಶ್ಯಕತೆ ಇದೆ. ಭಾರತದಲ್ಲಿ ಹುಟ್ಟಿ ಬೆಳೆದ ನಾವೆಲ್ಲರೂ ನಮ್ಮ ಜನ್ಮ ಭೂಮಿಯನ್ನು ಪ್ರೀತಿಸಬೇಕು. ಆದರೆ ಇಂದಿನ ಯುವ ಸಮಾಜ ಇಲ್ಲಿ ಶಿಕ್ಷಣ ಪಡೆದು ಹಣದ ಆಸೆಗೆ ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಈ ನಿಟ್ಟಿನಲ್ಲಿ ಭಾರತೀಯರು ತಾಯ್ನಾಡಲ್ಲೇ ಸೇವೆ ಸಲ್ಲಿಸಿ, ದೇಶವಾಸಿಗಳಿಗೆ ಸೇವೆ ನೀಡುವಂತೆ ಅವರು ತಿಳಿಸಿದ ಅವರು, ಭಾರತೀಯರು ಅಪಾರ ಬುದ್ಧಿ ಮತ್ತೆ ಹಾಗೂ ಕೌಶಲ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಾ ಪಲಾಯನ ಆಗದಂತೆ ತಡೆಯಬೇಕಾಗಿದೆ. ವಿದ್ಯಾವಂತ ಯುವ ಸಮಾಜ ದೇಶದಲ್ಲೇ ಉಳಿದು ಭಾರತೀಯರಿಗೆ ಸೇವೆ ನೀಡಬೇಕಾಗಿದೆ ಎಂದು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಸುಮಂತ ಹಿರೇಮಠ ಮಾತನಾಡಿ, ಪರಿಸರ ಸ್ವಚ್ಛತೆ ಕುರಿತು ನಾವು ಜಾಗೃತಿ ಹೊಂದಿರಬೇಕು ಎಂಬುದನ್ನು ಕುರಿತು ಕೆಲ ವಿಡಿಯೋ ಹಾಗೂ ಚಿತ್ರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಂಪನ್ಮೂಲಗಳ ಸಂರಕ್ಷಣೆಗೆ ಮತ್ತು ನಿರ್ವಹಣೆಯನ್ನು ಒತ್ತಿ ಹೇಳಿದರು.
ನೀರಿನ ಸಂರಕ್ಷಣೆ ಹಾಗೂ ತ್ಯಾಜ್ಯಗಳ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಹೇಳಿದರು.
ಶಾಲೆಗಳ ಪರಿಸರದಲ್ಲಿ ಕೇವಲ ಗಿಡಗಳನ್ನು ನೆಡುವುದಷ್ಟೇ ಅಲ್ಲ. ಪ್ರತಿದಿನ ಅವುಗಳಿಗೆ ನೀರು ಹಾಕಿ ಅವುಗಳ ಪೋಷಣೆ ಮಾಡುವ ಅಗತ್ಯವಿದೆ. ಪರಿಸರ ಸಂರಕ್ಷಣೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ. ಆದ್ದರಿಂದ ಪರಿಸರವನ್ನು ಸಂರಕ್ಷಣೆ ಮಾಡುವುದು ಮತ್ತು ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ ಎಂದರು.
ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹನುಮಂತ ಮೇಲಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ನವೀನ ಕಣಬರಗಿ ಉಪಸ್ಥಿತರಿದ್ದರು.
ನಿಧಿ ಪ್ರಾರ್ಥಿಸಿದರು. ತಸ್ನಿಮ್ ಪೀರಜಾದೆ ಸ್ವಾಗತಿಸಿದರು. ಭೂಮಿಕಾ ಕರನಿಂಗ, ಮಹಮ್ಮದ ಮುಕ್ರಾಂ ಶೇಖ್ ಪರಿಚಯಿಸಿದರು. ಸ್ಟಾನ್ಸಿಲಾ ಲೋಬೋ ವಂದಿಸಿದರು.
ಪ್ರೀತಿ ರಾಜಪುರೋಹಿತ ಹಾಗೂ ರಶ್ಮಿ ಬಿರಾದಾರ ನಿರೂಪಿಸಿದರು.