ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಮಂಗಳವಾರ ಇಬ್ಬರು ಪ್ರಮುಖ ನಾಯಕರು ನಾಮಪತ್ರ ಸಲ್ಲಿಕೆ ಮಾಡಿದರು.
ಚಿಕ್ಕೋಡಿ ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಮೇಶ ಕತ್ತಿ ಹುಕ್ಕೇರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರೆ, ಬೈಲಹೊಂಗಲ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಕೆಎಲ್ ಇ ಸಂಸ್ಥೆ ನಿರ್ದೇಶಕ ಡಾ. ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.
ಈ ಚುನಾವಣೆಯಲ್ಲಿ ಯಾವುದೇ ಪ್ಯಾನಲ್ ಇಲ್ಲ. ಆಯಾ ತಾಲೂಕಿನ ಮತದಾರರು ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ ಎಂದು ರಮೇಶ ಕತ್ತಿ ಹೇಳಿದರು.
ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು ಗೆದ್ದು ಬರುತ್ತೇನೆ ಎಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದುವರೆಗೆ 40 ವರ್ಷಗಳ ಕಾಲ ಡಿಸಿಸಿ ಬ್ಯಾಂಕಿನಲ್ಲಿ ಸೇವೆ ಮಾಡಿದ್ದೇನೆ. ಐದು ವರ್ಷ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 25 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಲ್ಲಾ 16 ಜನ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕಿನ ಪ್ರಗತಿ ಮಾಡಿದ್ದೇನೆ ಎಂದು ರಮೇಶ ಕತ್ತಿ ಹೇಳಿದರು.
ಲಕ್ಷ್ಮಣ ಸವದಿ ಮತ್ತು ನೀವು ಈ ಚುನಾವಣೆಯಲ್ಲಿ ಒಂದಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ರಮೇಶ ಕತ್ತಿ ಅವರು, ನಾವು ಒಂದಾಗಿಯೇ ಇದ್ದೇವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನಲ್ಲಿ ನನಗೆ ವಿರೋಧಿ ಬಣ ಇಲ್ಲ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ನಮಗೆ ಮ್ಯಾಜಿಕ್ ಸಂಖ್ಯೆ ಆಗಿರುವ 9ರ ಅವಶ್ಯಕತೆಯೂ ಇಲ್ಲ. ಸಮಾನ ಮನಸ್ಕರೆಲ್ಲ ನನ್ನ ಜೊತೆ ಬರುತ್ತಾರೆ. ಡಿಸಿಸಿ ಬ್ಯಾಂಕ್ ಅಧಿಕಾರ ಯಾರ ಕೈಗೆ ನೀಡಿದರೆ ಉತ್ತಮ ಎನ್ನುವುದು ಜನತೆಗೆ ಗೊತ್ತಿದೆ. ಸ್ವಲ್ಪ ವ್ಯತ್ಯಾಸವಾದರೂ 50 ಲಕ್ಷ ಜನರ ಬದುಕು ಬೀದಿಗೆ ಬರುತ್ತದೆ. ಆದ್ದರಿಂದ ಬ್ಯಾಂಕಿನ ಅಧಿಕಾರ ಯಾರ ಕೈಗೆ ಕೊಟ್ಟರೆ ಉತ್ತಮ ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.
1996 ರಲ್ಲಿ ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ದಿವಾಳಿಯಾಗಿತ್ತು. ಯಾರು ಅಧ್ಯಕ್ಷರಾಗಲು ಸಿದ್ಧರಿರಲಿಲ್ಲ. ಆಗ ನಾನು ಅಧ್ಯಕ್ಷನಾಗಿ ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಬ್ಯಾಂಕ್ ಅನ್ನು ಹಳಿಗೆ ತಂದೆ. ಠೇವಣಿದಾರರ ಹಣ ವಾಪಸ್ ಮಾಡಿದೆ. ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಇದೀಗ ನಾಮಪತ್ರ ಸಲ್ಲಿಸುತ್ತಿದ್ದು ಜನರ ಸೇವೆ ಮಾಡುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.