ಬೆಳಗಾವಿ : ವೀರಮಾತೆ ಜೀಜಾಬಾಯಿ, ಸ್ವಾಮಿ ವಿವೇಕಾನಂದರ ಜನ್ಮದಿನ ಮತ್ತು ಕಡೋಲಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಸ್ಥಾಪನೆಯಾಗಿ ನಾಲ್ಕು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ (ಜ.13) ಶುಕ್ರವಾರ ಕಡೋಲಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಮೈದಾನದಲ್ಲಿ ಸಂಜೆ 5 ಗಂಟೆಗೆ ಸ್ವರಾಜ್ಯ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸ್ವರಾಜ್ಯ ಸಂಕಲ್ಪ ಸಮಾವೇಶ” ವನ್ನು ಯಮಕನಮರಡಿ ಕ್ಷೇತ್ರದ ಬಹುಜನ ಸಮಾಜ, ಕಡೋಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಹಾಗೂ ಕಡೋಲಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಖ್ಯಾತ ನಟ, ಪರಿಣಾಮಕಾರಿ ವಾಗ್ಮಿ, ಸಂಸದ ಡಾ. ಅಮೋಲ್ ಕೋಲ್ಹೆ ಅವರು ಭಾಗವಹಿಸಲಿದ್ದು, ರಾಷ್ರ್ಟೀಯ ಧರ್ಮಚಾರ್ಯ ಪ.ಪೂ. ಭಗವಾನಗಿರಿ ಮಹರಾಜ ಹಾಗೂ ಕಡೋಲಿ ದುರ್ದುಂಡೇಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸಂಸದ ಡಾ. ಅಮೋಲ್ ಕೋಲ್ಹೆ ಅವರು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಛತ್ರಪತಿ ಸಂಭಾಜೀ ಮಹಾರಾಜರ ಪಾತ್ರಗಳನ್ನು ನಿರ್ವಹಿಸಿದ್ದು, ಜತೆಗೆ ಈ ಇಬ್ಬರ ಮಹಾನ್ ಪುರುಷರ ಚಿಂತನೆಗಳನ್ನು ಕಿರಿಯರಿಗೆ ಮತ್ತು ಹಿರಿಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಚಿಂತನೆಗಳು ಬಹುಜನ ಸಮಾಜಕ್ಕೆ ತಲುಪುವ ಅಗತ್ಯವಿದೆ. ಆದ್ದರಿಂದ ಬಹುಜನ ಸಮಾಜದ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಯಮಕನಮರಡಿ ಕ್ಷೇತ್ರದ ಹಾಗೂ ಬೆಳಗಾವಿ ತಾಲೂಕಿನ ಸಾವಿರಾರು ನಾಗರಿಕರು ಆಗಮಿಸಲಿದ್ದಾರೆ. ದೇಶ ಕಟ್ಟುವ ಕಾರ್ಯಕ್ಕೆ ಯುವಕರನ್ನು ಪ್ರೇರೇಪಿಸಲು ಸ್ವರಾಜ್ಯ ಸಂಕಲ್ಪ ಸಮಾವೇಶ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಪಾಟೀಲ್, ಯುವ ಅಘಾಡಿ ಅಧ್ಯಕ್ಷ ಭಾವು ಗಡ್ಕರಿ, ಕಡೋಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜು ಮೈನ್ನವರ, ರಾಜು ಮಾಯಣ್ಣಾ, ಮಾಜಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಮನೋಹರ ಹುಕ್ಕೇರಿಕರ್, ಸಾಗರ ಪಿಂಗಟ್, ನಾಗೇಶ ಪಾಟೀಲ್, ಮಲಗೌಡ ಪಾಟೀಲ್ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.