ಬೆಳಗಾವಿ :
ಕಿತ್ತೂರು ತಾಲೂಕು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಯವರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪತ್ರದಲ್ಲಿ ಓಂ ಕಾಳಿಕಾದೇವಿ ನಮಃ ಓಂ ಕಾಳಿಕಾದೇವಿ ನಮಃ ನಿಜಗುಣಾನಂದ 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು. 2023ರಲ್ಲಿ ಅದು ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ. ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನದು ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ. ಇನ್ನೂ ದಿನಗಳನ್ನು ಎಣಿಸು ಎಂಬ ಸಾಲುಗಳಿವೆ. ಈ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯಿಸಿ, ಇಂಥ ಕೊಲೆ ಬೆದರಿಕೆ ಪತ್ರಗಳನ್ನು ನಾನು ಪ್ರೇಮಪತ್ರಗಳೆಂದು ಭಾವಿಸಿರುವೆ. ನನಗೆ ಸಾವಿನ ಬಗ್ಗೆ ಭಯವಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ 20 ಜೀವ ಬೆದರಿಕೆ ಪತ್ರಗಳ ಬಂದಿವೆ. ಪತ್ರಗಳಲ್ಲಿ ಒಂದೇ ತರದ ಬರಹ ಇದ್ದು, ಒಬ್ಬ ವ್ಯಕ್ತಿ ಇದನ್ನು ಮಾಡುತ್ತಿದ್ದಾನೆ. ಬೇರೆ ಬೇರೆ ಕಡೆಗಳಿಂದ ಪತ್ರಗಳು ಬರುತ್ತವೆ. ಸಾವಿನ ಬಗ್ಗೆ ನನಗೆ ಭಯ ಇಲ್ಲ, ಆದರೆ ಸಾಮಾಜಿಕ ಸೇವೆ ಸ್ಥಗಿತವಾಗುತ್ತದೆ ಎಂಬ ಆತಂಕ ಇದೆ. ಸಂಪ್ರದಾಯವಾದಿಗಳ ಅಟ್ಟಹಾಸ ಮುಂದುವರೆದಿದೆ. ಇದಕ್ಕೆ ಸರ್ಕಾರ ತಿಲಾಂಜಲಿ ಇಡಬೇಕು ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದರು.
ನನ್ನನ್ನು ಕೊಲ್ಲುವುದಕ್ಕೆ ಬೆದರಿಕೆ ಹಾಕುವವರು ವೈಯಕ್ತಿಕ ದ್ವೇಷ ಸಾಧಿಸುತ್ತಿಲ್ಲ. ಬದಲಾಗಿ ಸೈದಾಂತಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸ್ವಾಮೀಜಿಗಳಿಗೆ ಜೀವ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಅವರ ವ್ಯವಸ್ಥಾಪಕ ವೀರೇಶ್ ಚವಲಗಿ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.