ಬೆಳಗಾವಿ : ಭಾರತ ಸಮೃದ್ಧ, ಬಲಿಷ್ಠ ಮತ್ತು ವಿದ್ಯಾವಂತ ದೇಶವಾಗಬೇಕು ಎನ್ನುವುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ಕೊಲ್ಕತ್ತಾ ಬೇಲೂರು ರಾಮಕೃಷ್ಣ ಮಿಷನ್ ಸಹಾಯಕ ಕಾರ್ಯದರ್ಶಿಗಳಾದ ಪೂಜ್ಯ ಸ್ವಾಮಿ ಸತ್ಯೇಶಾನಂದ ಮಹಾರಾಜರು ಹೇಳಿದರು.
133 ವರ್ಷಗಳ ಹಿಂದೆ ಅಂದರೆ 1892ರ ಅಕ್ಟೋಬರ್ 16 ರಂದು ಸ್ವಾಮಿ ವಿವೇಕಾನಂದರು ಬೆಳಗಾವಿ ರಿಸಾಲ್ದಾರಗಲ್ಲಿಯ ಭಾಟೆಯವರ ಮನೆಗೆ ಪಾದರ್ಪಣೆ ಮಾಡಿದ್ದ ಸವಿನೆನಪಿನಲ್ಲಿ ಸ್ವಾಮಿ ವಿವೇಕಾನಂದ ಮೆಮೋರಿಯಲ್ ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಸಮಾಜಕ್ಕೆ ಜ್ಞಾನೋದಯವನ್ನು ಮಾಡಿಸಿದ ಮಹಾತ್ಮರಾಗಿದ್ದಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ದುಃಖಗಳು ಮತ್ತು ತೊಂದರೆಗಳು ಇದ್ದೆ ಇರುತ್ತವೆ. ಆದರೆ ಅವುಗಳಿಗೆ ಹೆದರದೇ ಧೈರ್ಯದಿಂದ ಅಂತಹ ಸವಾಲುಗಳನ್ನು ಎದುರಿಸಬೇಕು. ದೇವರನ್ನು ಪೂಜಿಸಬೇಕು. ದೇವರ ಬಗ್ಗೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಪೂಜಿಸಿದರೆ ಸಹಾಯಕ್ಕೆ ಬಂದೇ ಬರುತ್ತಾನೆ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ನೀಡಿ ಹೋಗಿದ್ದಾರೆ ಎಂದು ಅವರು ಹೇಳಿದರು.
ನಂತರ ಮರಾಠಿಯಲ್ಲಿ ಮಾತನಾಡಿದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿಗಳಾದ ಪೂಜ್ಯ ಸ್ವಾಮಿ ಆತ್ಮಪ್ರಣಾನಂದಾಜಿ ಮಹಾರಾಜ್ ಅವರು 133 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಿರುವುದು ನಿಜಕ್ಕೂ ಅವಿಸ್ಮರಣೀಯ. ಬೆಳಗಾವಿ ಜನತೆ ಧನ್ಯರು ಎಂದು ಅವರು ಹೇಳಿದರು.
ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದ ಖ್ಯಾತಿಯ ಲೇಖಕ, ನಿರ್ದೇಶಕ, ಅಭಿನೇತ್ರ, ರಾಷ್ಟ್ರೀಯ ಕಲಾಕಾರ ದಾಮೋದರ ರಾಮದಾಸಿ ಅವರು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂಬ ಏಕಪಾತ್ರಾಭಿನಯ ನೀಡಿದರು.
ಈ ಸಂದರ್ಭದಲ್ಲಿ ಅವರು ಜೀವನಕ್ಕೆ ಧರ್ಮ ಮತ್ತು ಅಧರ್ಮ ಎಂಬ ಎರಡು ಮಾರ್ಗಗಳಿರುತ್ತವೆ. ರಾಮನು ಧರ್ಮದ ಮಾರ್ಗದಲ್ಲಿ ನಡೆದರೆ ರಾವಣನು ಅಧರ್ಮದ ದಾರಿಯಲ್ಲಿ ಮಾರ್ಗದಲ್ಲಿ ನಡೆಯುತ್ತಿದ್ದ. ಅದೇ ರೀತಿ ರಾಮನು ಅಧರ್ಮಿಯ ರಾವಣನನ್ನು ಸಂಹಾರ ಮಾಡಿ ಜಗತ್ತಿಗೆ ಧರ್ಮದ ಮಹತ್ವವನ್ನು ತೋರಿಸಿಕೊಟ್ಟಿದ್ದಾನೆ. ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ರಾಮ ಅತ್ಯುತ್ತಮ ಮಾದರಿ. ರಾಮನು ಆಧರ್ಮಿಯರನ್ನು ನಾಶ ಮಾಡಿ ಧರ್ಮ ಮಾರ್ಗದಲ್ಲಿ ನಡೆದು ಸನಾತನ ಧರ್ಮವನ್ನು ಕಾಪಾಡಿದ ದೇವರು ಎಂದು ಹೇಳಿದರು.
ರಾಮಾಯಣದ ವಿವಿಧ ಸನ್ನಿವೇಶಗಳನ್ನು ಅದರಲ್ಲೂ ಶಬರಿ ರಾಮನಿಗಾಗಿ ಕಾಯುವುದು ಮುಂತಾದ ಸನ್ನಿವೇಶಗಳ ಮೂಲಕ ಅವರು ಶ್ರೇಷ್ಠ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದರು.
ಇದೇ ದಿನ 3000ಕ್ಕೂ ಹೆಚ್ಚು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು.
ಶುಕ್ರವಾರದಂದು ವಿವಿಧ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. 400 ಕ್ಕು ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.