ಬೆಳಗಾವಿ : ಸವದತ್ತಿ ತಾಲೂಕಿನ ಇನಾಮಹೊಂಗಲದ ಐಶ್ವರ್ಯ ಸುರಗಣ್ಣವರ ಅವರ ತಂದೆ ಕೂಲಿ ಕೆಲಸ ಮಾಡುತ್ತಾರೆ. ಐಶ್ವರ್ಯ ಹೈಸ್ಕೂಲು ಪ್ರವೇಶ ಮಾಡಿದಾಗಲೇ ಮುಂದೆ ತಾನು ಡಾಕ್ಟರ್ ಆಗಬೇಕೆಂಬ ಕನಸು ಕಂಡವರು.
ಐಶ್ವರ್ಯ ಎಸ್.ಎಸ್.ಎಲ್.ಸಿಯಲ್ಲಿ ಶೇ.99.04 ಅಂಕ ಪಡೆದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟಿನ ಪ್ರಕಲ್ಪ ವಿವೇಕ ಸ್ಕಾಲರ್ ಪ್ರೋಗ್ರಾಂನಲ್ಲಿ ಆಯ್ಕೆಯಾಗಿ, ಧಾರವಾಡದ ಶ್ರೀಮತಿ ವಿದ್ಯಾ ಪಿ.ಹಂಚಿನಮನಿ ಕಾಲೇಜಿನಲ್ಲಿ ಪಿ.ಯು.ಸಿ ಕಲಿತು, 2ನೇ ಪಿ.ಯು.ಸಿಯಲ್ಲಿ ಶೇ.96.04 ಅಂಕ ಪಡೆದಳು. ನೀಟ್ ಪರೀಕ್ಷೆ ಬರೆದು, ಸರ್ಕಾರಿ ಕೋಟಾದಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದು, ತುಮಕೂರಿನ ಸಿದ್ದಗಂಗಾ ವೈಧ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ಮಾಡುತ್ತಿದ್ದಾರೆ. ವಿವೇಕ ಸ್ಕಾಲರ್ ಪ್ರೋಗ್ರಾಂ ಪ್ರಕಲ್ಪದಡಿ ಆಯ್ಕೆಯಾದ ಐಶ್ವರ್ಯಳ ಬ್ಯಾಚಿನಲ್ಲಿ ಮೂವರು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಸೀಟು ಪಡೆದು ಎಂ.ಬಿ.ಬಿ.ಎಸ್ ಮಾಡುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ.
ಬಡತನ ಮೆಟ್ಟಿನಿಂತು, ಬಂದಿರುವ ಸವಾಲುಗಳನ್ನೆಲ್ಲಾ ಧೈರ್ಯದಿಂದ ಎದುರಿಸುತ್ತಾ, ತಾವು ಕಟ್ಟಿಕೊಂಡ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿರುವ ಇಂತಹ ಮಕ್ಕಳನ್ನು ಕಂಡಾಗ ಹೆಮ್ಮೆ ಎನಿಸುತ್ತದೆ. ಈ ಮಕ್ಕಳ ಉನ್ನತ ಶಿಕ್ಷಣ ಮುಗಿಯುವವರೆಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವಿವಿಧ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ವೇತನ ನೀಡುವ ಮೂಲಕ ಮಕ್ಕಳ ಕನಸು ನನಸು ಮಾಡಿಕೊಳ್ಳಲು ಊರುಗೋಲಾಗಿ ನಿಲ್ಲಲಿದೆ ಎಂದು ವಿವೇಕ ಸ್ಕಾಲರ್ ಪ್ರೋಗ್ರಾಂನ ವೀಣಾ ನಾವಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್, ನಿರ್ವಹಣಾ ಸಮಿತಿ ಸದಸ್ಯ ಡಾ.ಗೋಪಾಲಕೃಷ್ಣ ಕಮಲಾಪುರ ತಿಳಿಸಿದ್ದಾರೆ.