ಬೆಳಗಾವಿ: ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸದ್ಯ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಬರಮನಿ ಅವರನ್ನು ರಾಜ್ಯ ಸರಕಾರ ಇದೀಗ ಬೆಳಗಾವಿ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿಯಲ್ಲಿ ಸಬ್ ಇನ್ಸ್ಪೆಕ್ಟರ್, ಎಸಿಪಿ ಅಗಿ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ಅವರನ್ನು ಮತ್ತೆ ಬೆಳಗಾವಿ ಜಿಲ್ಲೆಗೆ ರಾಜ್ಯ ಸರಕಾರ ನಿಯುಕ್ತಿ ಮಾಡಿದೆ. ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಲಿಸ್ ಅಧಿಕಾರಿಯಾಗಿದ್ದ ನಾರಾಯಣ ಬರಮನಿ ಅವರನ್ನು ಕರೆಸಿ ಪ್ರತಿಭಟನೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ಯಾಕೆ ತಡೆಯಲಿಲ್ಲ ಎಂದು ನಾರಾಯಣ ಬರಮನಿ ಅವರಿಗೆ ಹೊಡೆಯಲು ಮುಂದಾಗಿದ್ದರು. ಇದರಿಂದ ತೀವ್ರ ನೊಂದಿದ್ದ ನಾರಾಯಣ ಬರಮನಿ ಅವರು ಸೇವಾ ನಿವೃತ್ತಿಗೆ ಮುಂದಾಗಿದ್ದರು. ಆದರೆ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅವರನ್ನು ಸಮಾಧಾನಪಡಿಸಿ ಮತ್ತೆ ಸೇವೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಸರಕಾರವೇ ಮತ್ತೆ ಅವರನ್ನು ಬೆಳಗಾವಿಗೆ ನೇಮಕ ಮಾಡಿ ಅಚ್ಚರಿ ಮೂಡಿಸಿದೆ.
ಬೆಳಗಾವಿಯಲ್ಲಿ ಡಿಸಿಪಿಯಾಗಿದ್ದ ರೋಹನ್ ಜಗದೀಶ್ ಅವರನ್ನು ರಾಜ್ಯ ಸರಕಾರ ಎರಡು ದಿನಗಳ ಹಿಂದಷ್ಟೇ ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.