ದೆಹಲಿ :
ಬೆಳಗಾವಿ ಗಡಿ ವಿವಾದ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ಇಂದು ವಾಗ್ದಾಳಿ ನಡೆಸಿದ ಘಟನೆ ನಡೆದಿದೆ.
ಈ ಮೂಲಕ ಮಹಾರಾಷ್ಟ್ರ ಸಂಸದರು ಲೋಕಸಭೆಯಲ್ಲೂ ಗಡಿ ವಿವಾದದ ಕಿಚ್ಚು ಹೊತ್ತಿಸಲು ಮುಂದಾಗಿರುವ ಸನ್ನಿವೇಶ ನಡೆದಿದೆ.
ಆದರೆ, ಕರ್ನಾಟಕದ ಹಾವೇರಿ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ, ಮಹಾರಾಷ್ಟ್ರ ಸಂಸದೆಯ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗಡಿ ವಿವಾದದ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಮಹಾರಾಷ್ಟ್ರ ಸದಸ್ಯರಿಗೆ ಅವಕಾಶ ಮಾತನಾಡಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಉಭಯ ರಾಜ್ಯಗಳ ನಡುವೆ ಇರುವ ಸೂಕ್ಷ್ಮ ವಿಷಯ ಇದಾಗಿದ್ದು ಇದನ್ನು ಇಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ಮಾತನಾಡಲು ಅವಕಾಶ ನಿರಾಕರಿಸಿದರು.
ಇದರಿಂದ ಅತ್ರಪ್ತರಾದ ಎನ್ ಸಿಪಿ ಸದಸ್ಯೆ ಸುಪ್ರಿಯ ಸುಳೆ ಅವರು, ಉಭಯ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರದ ಜನರಿಗೆ ಥಳಿಸಲಾಗಿದೆ. ಇದನ್ನು ಯಾವುದೇ ಕಾರಣಕ್ಕೆ ಸಹಿಸಲಾಗುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರವನ್ನು ಒಡೆಯಲು ಸಂಚು ರೂಪಿಸಿ ಮಹಾರಾಷ್ಟ್ರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪಗಳ ಸುರಿಮಳೆಗೈದರು.
ಬೆಳಗಾವಿ ವಿವಾದವನ್ನು ಈ ಮೂಲಕ ಮಹಾರಾಷ್ಟ್ರ ಸಂಸದರು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮುಂದಾಗಿರುವುದು ಕಂಡುಬಂತು.