ಬೆಂಗಳೂರು: ವಕೀಲರೊಬ್ಬರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ನೀಡಿದೆ.
ವಕೀಲ ಕೆ. ದಿಲೀಪ್ ಕುಮಾರ್ ಎಂಬುವವರು ಖಾಸಗಿ ದೂರು ನೀಡಿದ್ದರು. ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನ್ನಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಸಮನ್ಸ್ ನೀಡಿದೆ.
ಖಾಸಗಿ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಕೆ.ಎನ್.ಶಿವಾನಂದ ಆ.22 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ದೂರಿನಲ್ಲಿ ಧರ್ಮ ನಿಂದನೆ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಪಯತ್ನವನ್ನು ಸತೀಶ ಜಾರಕಿಹೊಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಿಂದೂ ಎಂಬುದು ಅರಬ್ ಭಾಷೆಯ ಪದ, ಅರಬ್ನಲ್ಲಿ ಹಿಂದೂ ಎಂದರೆ ಕಳ್ಳರ ಗುಂಪು ಎಂದರ್ಥ ಎಂಬ ಹೇಳಿಕೆಯನ್ನು ಸತೀಶ ಜಾರಕಿಹೊಳಿ ಅವರು ಸಮರ್ಥನೆ ಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದನ್ನು ವಿರೋಧಿಸಿ, ಖಾಸಗಿ ದೂರು ದಾಖಲಾಗಿತ್ತು.