ಬಂಟ್ವಾಳ : ಹಿಂದೂ ಧರ್ಮವು ಪರಿಶುದ್ಧ ಗಂಗೆಯ ಸ್ವರೂಪ. ಈ ಧರ್ಮದ ಮೇಲೆ ಏಕಿಷ್ಟು ಆಕ್ರೋಶ ಎಂದು ಯುವ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಗ್ರಹಿಸಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅವರು ಮಾತನಾಡಿದರು.
ಹೋಳಿ ಇರಲಿ, ದೀಪಾವಳಿ ಹಬ್ಬ ಇರಲಿ ಹಿಂದೂ ಧರ್ಮದ ಮೇಲೆ ನಿರಂತರ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ. ಹಿಂದೂಗಳ ಆಚರಣೆಗಳನ್ನು ಮಾಧ್ಯಮಗಳ ಮೂಲಕ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳ ಶ್ರದ್ದಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಂತರ ಮೇಲೆ ಆರೋಪಗಳನ್ನು ಹಾಕಲಾಗುತ್ತದೆ, ಆಕ್ರಮಣಗಳನ್ನು ಮಾಡಲಾಗುತ್ತದೆ. ಎಡಪಂಥೀಯರು ಹಿಂದೂಗಳನ್ನು ಜಾತಿ ಮತ ಪಂಥಗಳ ಹೆಸರಿನಲ್ಲಿ ವಿಭಜಿಸುತ್ತಾರೆ. ಅಮೆರಿಕ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೇ ಕರ್ತವ್ಯವಾಗಿದೆ ಎಂಬ ಅರಿವು ಮೂಡಿಸುವುದು. ಧರ್ಮ ರಕ್ಷಣೆಗಾಗಿ ಸರ್ವಸ್ವದ ತ್ಯಾಗ ಮಾಡಲು ನಾವು ಸಿದ್ದರಾಗಿರಬೇಕು. ಹಿಂದೂ ಸಮಾಜ ಜಾಗೃತವಾದರೆ ಇತರರು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ವಕೀಲ ಕೃಷ್ಣಮೂರ್ತಿ, ‘ಸ್ವಾರ್ಥ ಮರೆತು ನಾವು ಪರಮಾರ್ಥದ ಕಡೆಗೆ ಹೋಗಬೇಕಾಗಿದೆ, ವಿವಿಧ ಸಂಘಟೆನೆಗಳೆಲ್ಲಾ ಸೇರಿ ಹಿಂದೂ ರಾಷ್ಟ್ರದೆಡೆಗೆ ಸಾಗಬೇಕಾಗಿದೆ. ಇದಕ್ಕಾಗಿ ನ್ಯಾಯ ವ್ಯವಸ್ಥೆಯನ್ನು ಅರಿತುಕೊಂಡು ಅದರ ಸದುಪಯೋಗಪಡಿಸಿಕೊಳ್ಳಬೇಕು. ವಕೀಲರು ರಾಷ್ಟ್ರ ಮತ್ತು ಧರ್ಮದ ವಿಚಾರಗಳನ್ನು ತಮ್ಮ ಕರ್ತವ್ಯವೆಂದು ಪರಿಭಾವಿಸಿ ಈ ವಿಚಾರದಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕು’ ಎಂದರು.
ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ, ಸನಾತನ ಸಂಸ್ಥೆಯ ಸಂತ ರಮಾನಂದ ಗೌಡ, ವಕೀಲ ಕೃಷ್ಣಮೂರ್ತಿ, ಚಕ್ರವರ್ತಿ ಸೂಲಿಬೆಲೆ, ಉದ್ಯಮಿ ಎಂ. ಜೆ. ಶೆಟ್ಟಿ ಉಪಸ್ಥಿತರಿದ್ದರು.