ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಬಜಾರ ಗಲ್ಲಿಯ ಹಿರಿಯರಾದ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯರಾದ ಹಾಗೂ ಲಿಂಗಾಯತ ಸಮಾಜದ ಮುಖಂಡರಾದ ಶಿವಪುತ್ರಪ್ಪ ಬಸವಣ್ಣೆಪ್ಪ ಹಂಪಿಹೊಳಿ(93) ಬುಧವಾರ ರಾತ್ರಿ ನಿಧನರಾದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ. 19ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ.
ಹಲವಾರು ವರ್ಷಗಳಿಂದ ಶಿವಪುತ್ರಪ್ಪ ಹಂಪಿಹೊಳಿ ಅವರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಗ್ರಾಮದ ಏಳ್ಗೆಗೆ ಹಗಲಿರುಳು ಶ್ರಮಿಸಿದ್ದಾರೆ. ಶಿಕ್ಷಣ ಪ್ರೇಮಿಗಳಾಗಿದ್ದರು.
ಶಿವಪುತ್ರಪ್ಪ ಹಂಪಿಹೊಳಿ ಅವರು ಸರಳ-ಸಜ್ಜನ ವ್ಯಕ್ತಿತ್ವದಿಂದ ಸುಳೇಭಾವಿ ಗ್ರಾಮದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರಾಗಿ ಅವರು ಸಲ್ಲಿಸಿದ್ದ ಸೇವೆ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಅನುಪಮ ಸೇವೆಯನ್ನು ಜನ ಸದಾ ನೆನಪಿಸಿಕೊಳ್ಳುತ್ತಿದ್ದರು. ಮಾನವೀಯತೆ, ಸಹನಶೀಲತೆ, ತಾಳ್ಮೆ, ಸರಳ ಸಜ್ಜನಿಕೆ, ನಾಯಕತ್ವ ಗುಣ ಹೀಗೆ ಮುಂತಾದ ಅವರ ಸ್ವಭಾವ ಅನುಕರಣೀಯವಾಗಿತ್ತು. ಇಂತಹ ಹಿರಿಯರನ್ನು ಕಳೆದುಕೊಂಡಿರುವುದಕ್ಕೆ ಸುಳೇಭಾವಿ ಜನತೆ ಕಂಬನಿ ಮಿಡಿದಿದ್ದಾರೆ.