ಬೆಳಗಾವಿ:
ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಗೆ ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ಬಳೆಯ ಅಲಂಕಾರ ಮಾಡಲಾಗಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ದೇವಿಗೆ ಉಡಿ ತುಂಬಿದರು.
ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ದೇವಸ್ಥಾನಕ್ಕೆ ಆಗಮಿಸಿತ್ತು. ಬೆಳಗ್ಗೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವಿಗೆ ಉಡಿ ತುಂಬಿದರು. ಶ್ರಾವಣ ಮಾಸದ ಕೊನೆಯ ಮಂಗಳವಾರ ಪ್ರತಿ ವರ್ಷ ಗ್ರಾಮಸ್ಥರು ಉಡಿ ತುಂಬುವ ಸಂಪ್ರದಾಯವಿದ್ದು, ಅದರಂತೆ ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಪುನೀತರಾದರು.
ದೇವಿಗೆ ವಿಶೇಷವಾಗಿ ಬಳೆಯ ಅಲಂಕಾರ ಮಾಡಲಾಗಿತ್ತು. ಜತೆಗೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣ ಹಾಗೂ ಹೂವಿನಿಂದ ಸಿಂಗಾರ ಮಾಡಲಾಗಿತ್ತು. ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಗಂಟೆಗಟ್ಟಲೇ ಕಾಯ್ದು ದೇವಿಯ ದರ್ಶನ ಪಡೆದರು.
ದೇವಸ್ಥಾನ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾಂಜ್ ಪಥಕ, ಢೋಲ್ ತಾಷಾ, ಬ್ಯಾಂಡ್ ಸೇರಿದಂತೆ ವಿವಿಧ ದೇಸಿ ವಾದ್ಯ ಮೇಳಗಳು ಗಮನಸೆಳೆದವು. ಸಂಜೆಯ ಹೊತ್ತಿಗೆ ದೇವಸ್ಥಾನ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ಹೊತ್ತಿಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ಗ್ರಾಮದ ಹಿರಿಯರು ದೈವದ ಉಡಿ ತುಂಬಿದರು. ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು ಗಾರಾಯಣ ಇಳಿಸುವ ಮೂಲಕ ವಾರ ಪಾಲಿಸುವ ಕಾರ್ಯ ಸಂಪನ್ನಗೊಳಿಸಲಾಯಿತು.
ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಮತ್ತು ಮಂಗಳವಾರ ವಾರ ಬಿಡುವ ಪದ್ಧತಿ ನಡೆದುಕೊಂಡು ಬಂದಿದ್ದು, ಇದು ಐದನೇ ವಾರವಾಗಿದೆ. ವಾರ ಪಾಲಿಸುವ ಪದ್ಧತಿಯಲ್ಲಿ ಗ್ರಾಮದಲ್ಲಿ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ದೇವರ ಆರಾಧನೆ ಮಾಡಲಾಗುತ್ತದೆ. ಗ್ರಾಮದ ಶ್ರೀ ಕಲ್ಮೇಶ್ವರ ದೇವರು ಸೇರಿದಂತೆ ಎಲ್ಲ ದೇವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.
ಸುಳೇಭಾವಿ ಗ್ರಾಮಕ್ಕೆ ಬೆಳಗಾವಿಯಿಂದ ಬರುವ ಬಹುತೇಕ ಸಾರಿಗೆ ಬಸ್ಗಳು ತುಂಬಿ ತುಳುಕುತ್ತಿದ್ದವು. ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದ್ದರಿಂದ ಬಸ್ಗಳನ್ನು ಹೆಚ್ಚುವರಿಯಾಗಿ ಬಿಡಲಾಗಿತ್ತು. ಪರ ಊರುಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.