ಬೆಂಗಳೂರು: ಶರಣಾಗತಿ ಬಯಸಿರುವ ಆರು ನಕ್ಸಲರು ಇದೀಗ ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ಶರಣಾಗತಿಯಾಗಲು ಮುಂದಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಎದುರು ಶರಣಾಗತಿ ಕಾರ್ಯಕ್ರಮ ಇತ್ತು. ಆದರೆ ಈ ಕಾರ್ಯಕ್ರಮವನ್ನು ದಿಢೀರ್ ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಎದುರು ಶರಣಾಗಲಿದ್ದಾರೆ. ಬಾಳೆಹೊನ್ನೂರಿನಿಂದ ನಕ್ಸಲಿಯರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನನ್ನ ಸಮ್ಮುಖದಲ್ಲಿ ನಕ್ಸಲರು ಮುಖ್ಯ ವಾಹಿನಿಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದ್ದಾರೆ. ಆದ್ದರಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್.ಅಶೋಕ್ ಹೇಳಿದ್ದಾರೆ.
ಈ ಮೊದಲು ನಕ್ಸಲರು ಮುಖ್ಯ ವಾಹಿನಿಗೆ ಸೇರುವ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಿ ಏರ್ಪಟ್ಟಿತ್ತು. ಆದರೆ ದಿಡೀರ್ ಬೆಂಗಳೂರಿಗೆ ವರ್ಗಾವಣೆಗೊಂಡಿದೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ದಲಿತ ಸಂಘಟನೆಗಳ ಮುಖಂಡರು ನಕ್ಸಲರ ಕುಟುಂಬದವರು ಕಾದಿದ್ದರು. ಶೃಂಗೇರಿಯಿಂದ ಚಿಕ್ಕಮಗಳೂರು ಕಡೆಗೆ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಆರು ನಕ್ಸಲರೊಂದಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಪೊಲೀಸರು ಎಲ್ಲರನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ