ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್ಎಲ್ಯು) ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಗಳನ್ನು ಗಳಿಸಿ ಸಂಸ್ಥೆಗೆ ಗೌರವ ತಂದಿದ್ದಾರೆ. ಎಲ್ಎಲ್ಬಿ ವಿದ್ಯಾರ್ಥಿ ಸತೀಶ್ ಏಳನೇ ಶ್ರೇಣಿಯನ್ನು ಪಡೆದರೆ, ಐದು ವರ್ಷಗಳ ಬಿಎ, ಎಲ್ಎಲ್ಬಿ ಕೋರ್ಸ್ನ ಕ್ಷಮಾ ಎನ್. ಭಟ್ ಒಂಬತ್ತನೇ ಶ್ರೇಣಿಯನ್ನು ಪಡೆದಿದ್ದಾರೆ. ಜೊತೆಗೆ, ವಿಶ್ವವಿದ್ಯಾಲಯದ ಕ್ರಿಮಿನಲ್ ಲಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ತೇಜಸ್ವಿನಿ ಜಿ. ಸೋಮಸಾಲೆ ಮತ್ತು ಕೇದಾರ್ ವಿ. ಗೋಡೆ ಅವರಿಗೆ ನಗದು ಬಹುಮಾನ ನೀಡಲಾಯಿತು.
ಹುಬ್ಬಳ್ಳಿ ಕೆಎಸ್ಎಲ್ಯುನಲ್ಲಿ ನಡೆದ ಏಳನೇ ಪದವಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನೀಡಲಾಯಿತು. ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಮತ್ತು ವಕೀಲ ಪಿ.ಎಸ್. ಸಾವಕಾರ, ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಠಗಾರೆ, ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಆರ್.ಎಸ್. ಮುತಾಲಿಕ್, ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಹವಾಲ್ದಾರ್ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸಂಯೋಜಕ ಡಾ. ಡಿ. ಪ್ರಸನ್ನಕುಮಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸಾಧಕರನ್ನು ಅಭಿನಂದಿಸಿದ್ದಾರೆ.


