ಕಡೋಲಿ ಹಾಗೂ ಮಣ್ಣಿಕೇರಿ ಗ್ರಾಮಕ್ಕೆ ಹೆಚ್ಚುವರಿ ಬಸ್ಸುಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..!
KSRTC ಅಧಿಕಾರಿಗಳ ಬೆವರಿಳಿಸಿದ ನೊಂದ ವಿಧ್ಯಾರ್ಥಿಗಳು ..!
ಬೆಳಗಾವಿ: ಎನ್ಡಬ್ಲ್ಯುಕೆಆರ್ಟಿಸಿಯು ಕಡೋಲಿ ಹಾಗೂ ಮಣ್ಣಿಕೇರಿ ಮಾರ್ಗಕ್ಕೆ ಹೆಚ್ಚಿನ ಬಸ್ಗಳನ್ನು ಬಿಡುವಂತೆ ಒತ್ತಾಯಿಸಿ ಬೆಳಗಾವಿಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಕಡೋಲಿ ಹಾಗೂ ಮಣ್ಣಿಕೇರಿ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ಬೆಳಗಾವಿ ತಾಲೂಕಿನ ಕಡೋಲಿ – ಮಣ್ಣಿಕೇರಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಬೆಳಗಾವಿಗೆ ಬಸ್ನಲ್ಲಿ ಪ್ರಯಾಣಿಸುತ್ತಾರೆ. ಆದರೆ, ಈ ಮಾರ್ಗದಲ್ಲಿ ಅತ್ಯಂತ ಕಡಿಮೆ ಬಸ್ಗಳು ಸಂಚರಿಸುವುದರಿಂದ ಪ್ರತಿ ಬಾರಿಯೂ ಬಸ್ಗಳು ಕಿಕ್ಕಿರಿದು ತುಂಬಿರುತ್ತವೆ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಬಸ್ಗಳು ತುಂಬಿ ತುಳುಕುತ್ತಿದ್ದರಿಂದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿ ರವಿನಾ ಧಾಯಗೋಂಡೆ ಬಸ್ ಹತ್ತುವಾಗ ಕೆಳಗೆ ಬಿದ್ದಿದ್ದಾಳೆ. ಆಕೆಗೆ ಗಾಯಗಳಾಗಿದ್ದು, ನಂತರ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಮಾರ್ಗದಲ್ಲಿ ಸಾಕಷ್ಟು ಬಸ್ಗಳು ಸಂಚರಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಧರಣಿ ನಿರತ ವಿದ್ಯಾರ್ಥಿಗಳು ಹೇಳಿದರು ಮತ್ತು ಕಡೋಲಿ ಮಾರ್ಗದಲ್ಲಿ ಹೆಚ್ಚಿನ ಬಸ್ಗಳನ್ನು ಬಿಡುಗಡೆ ಮಾಡುವಂತೆ ಎನ್ಡಬ್ಲ್ಯುಆರ್ಟಿಸಿಯ ಡಿಪೋ ವ್ಯವಸ್ಥಾಪಕರನ್ನು ಒತ್ತಾಯಿಸಿದರು.
ವಿಧ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸುದ್ದಿ ತಿಳಿದು ಕಾಕತಿ ಪಿಎಸ್ಐ ಮಂಜುನಾಥ ಹುಲಕುಂದ ಸ್ಥಳಕ್ಕೆ ಆಗಮಿಸಿ ಆಕ್ರೋಶದಲ್ಲಿದ್ದ ವಿಧ್ಯಾರ್ಥಿಗಳನ್ನು ಸಮಾಧಾನ ಪಡಿಸಿದರು.
ನಂತರ ಸಾರಿಗೆ ಅಧಿಕಾರಿ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ಬಿಡುವ ಭರವಸೆ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಕಡೋಲಿಯ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಸುತಾರ, ಸದಸ್ಯ ದತ್ತಾ ಸುತಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಮಾರಿಹಾಳಕರ, ನಮ್ರತಾ ಕಾಂಬಳೆ, ರೋಶನಿ ಪಾಟೀಲ, ಸ್ವಾತಿ ಕಲ್ಕುಂದ್ರಿಕರ, ಮೃದುಲಾ ಪಾಟೀಲ, ಪ್ರಣಾಲಿ ಕಟಾಂಬಳೆ ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಣ್ಣಿಕೇರಿಯಲ್ಲಿ ಬಿಜೆಪಿ ಮುಖಂಡ ಹಗೂ ಗ್ರಾ ಪಂ ಸದಸ್ಯರಾದ ಬಾಳು ಗಡಾಜೀ, ಅನೀಲ ಹೊಸಮನಿ, ಮಾರುತಿ ಮಾಸ್ತಿಹೋಳಿ,ಬಾಳು ಹಡಲಗಿ ವಿಧ್ಯಾರ್ಥಿಗಳಾದ ಪ್ರಭಾ ಲಂಗೋಟಿ, ಸರಿತಾ ಕಲಖಾಂಬಕರ,ಸುಜಾತಾ ಗುಡಾಜಿ , ಓಂಕಾರ ಸುತಾರ, ಸೋಮನಾಥ, ಚೇತನ ಸೇರಿದಂತೆ ನೂರಾರು ವಿಧ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.