ಕೊಲ್ಕತ್ತಾ : ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಈ ನಬದ್ವೀಪ ಎಂಬ ನದಿದಂಡೆಯ ಪಟ್ಟಣವು ಚಳಿಗಾಲದ ಚಳಿಯಲ್ಲಿ ಮುಳುಗಿದ್ದಾಗ, ರೈಲ್ವೆ ನೌಕರರ ವಸತಿ ಸಮುಚ್ಚಯದ ಶೌಚಾಲಯದ ಹೊರಗೆ ನವಜಾತ ಶಿಶುವನ್ನು ಯಾರೋ ನಿರ್ದಯವಾಗಿ ಬಿಟ್ಟು ಹೋಗಿದ್ದರು.
ಕೇವಲ ಕೆಲವೇ ಗಂಟೆಗಳ ಜನಿಸಿದ್ದ ಈ ಮಗುವಿನ ದೇಹದ ಮೇಲೆ ಹೆರಿಗೆಯ ರಕ್ತದ ಗುರುತುಗಳಿದ್ದವು. ಹೊದಿಕೆ ಇಲ್ಲ, ಯಾವುದೇ ಪತ್ರ ಇಲ್ಲ, ಸುತ್ತಮುತ್ತ ಯಾರೂ ಇರಲಿಲ್ಲ. ಆದರೆ, ಮಗು ಮಾತ್ರ ಏಕಾಂಗಿಯಾಗಿ ಇರಲಿಲ್ಲ….
ಆದರೆ ಈ ಘಟನೆ ಒಂದು ಪವಾಡದಂತೆ ಇದೆ. ಯಾಕೆಂದರೆ ಸಾಮಾನ್ಯವಾಗಿ ಜನರು ಓಡಿಸುವ ಬೀದಿ ನಾಯಿಗಳ ಗುಂಪು, ಆ ನವಜಾತ ಶಿಶುವಿನ ಸುತ್ತಲೂ ಒಂದು ಪರಿಪೂರ್ಣ ವೃತ್ತಾಕಾರವನ್ನು ರಚಿಸಿ ಕಾಯುತ್ತ ನಿಂತಿದ್ದವು. ಅವು ಬೊಗಳದೆ, ಚಲಿಸದೆ, ಇಡೀ ರಾತ್ರಿ ಈ ನವಜಾತ ಶಿಶುವಿನ ಸುತ್ತಲೂ ಕಾವಲು ಕಾಯುತ್ತಾ ನಿಂತಿದ್ದವು.
ಮುಂಜಾನೆಯ ಬೆಳಕು ಬೀಳುವವರೆಗೂ ರಕ್ಷಣೆ..!
ಈ ವಸತಿ ಸಮುಚ್ಚಯದ ನಿವಾಸಿಗಳು ಹೇಳುವ ಪ್ರಕಾರ, ನಾಯಿಗಳು ರಾತ್ರಿಯಿಡೀ ಯಾರನ್ನೂ ಅಥವಾ ಯಾವುದನ್ನೂ ಮಗುವಿನ ಹತ್ತಿರ ಬರಲು ಬಿಡಲಿಲ್ಲ. ಮುಂಜಾನೆಯ ಬೆಳಕು ಬಿದ್ದ ನಂತರವೇ ಅವು ಜನರಿಗೆ ಮಗುವನ್ನು ನೋಡಲು ಅವಕಾಶ ನೀಡಿದವು.
“ನಾವು ಬೆಳಿಗ್ಗೆ ಎದ್ದಾಗ ನೋಡಿದ ದೃಶ್ಯ ಈಗಲೂ ನಮಗೆ ಮೈ ಜುಮ್ಮೆನಿಸುತ್ತದೆ,” ಎಂದು ಮಗುವನ್ನು ಮೊದಲು ನೋಡಿದ ನಿವಾಸಿಗಳಲ್ಲಿ ಒಬ್ಬರಾದ ಶುಕ್ಲಾ ಮೊಂಡಲ ಹೇಳಿದ್ದಾರೆ. “ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಅವು ಅತ್ಯಂತ ಎಚ್ಚರಿಕೆಯಿಂದ ನೋಡುತ್ತಿದ್ದವು. ಆ ಮಗು ಬದುಕಲು ಹೋರಾಡುತ್ತಿದೆ ಎಂದು ಅವುಗಳಿಗೆ ತಿಳಿದಿರುವಂತೆ ಇತ್ತು ಎಂದು ಅವರು ಘಟನೆ ಬಗ್ಗೆ ವಿವರಿಸಿದ್ದಾರೆ.
ಮತ್ತೊಬ್ಬ ನಿವಾಸಿ, ಸುಭಾಷ ಪಾಲ ಎಂಬವರು, ಮುಂಜಾನೆ ಕೇಳಿದ ಮಗುವಿನ ಅಳುಗನ್ನು ನೆನಪಿಸಿಕೊಂಡರು. “ಯಾರದ್ದೋ ಮನೆಯಲ್ಲಿ ರೋಗಗ್ರಸ್ತ ಮಗು ಇರಬಹುದು ಎಂದುಕೊಂಡೆ. ಆದರೆ ಹೊರಗೆ ನವಜಾತ ಶಿಶು ಮಲಗಿತ್ತು, ಅದನ್ನು ನಾಯಿಗಳು ಕಾಯುತ್ತಿದ್ದವು ಎಂದು ಊಹಿಸಿರಲಿಲ್ಲ. ಅವು ಗಸ್ತು ಕಾಯುವವರಂತೆ ವರ್ತಿಸುತ್ತಿದ್ದವು ಎಂದು ಅವರು ತಿಳಿಸಿದರು.
ತಕ್ಷಣವೇ ಆಸ್ಪತ್ರೆಗೆ ದಾಖಲು
ಶುಕ್ಲಾ ಅವರು ಮಗುವಿನ ಬಳಿ ಮೆಲ್ಲಗೆ ಪಿಸುಗುಟ್ಟುತ್ತಾ ಹೋದಾಗ ಮಾತ್ರ, ನಾಯಿಗಳು ಮಗುವಿನ ಸುತ್ತಲಿನ ತಮ್ಮ ಭದ್ರಕೋಟೆಯನ್ನು ಅವರಿಗೆ ಸ್ವಲ್ಪ ಸಡಿಲಗೊಳಿಸಿದವು. ಶುಕ್ಲಾ ತಕ್ಷಣ ಮಗುವನ್ನು ತಮ್ಮ ದುಪ್ಪಟದಲ್ಲಿ ಸುತ್ತಿ, ನೆರೆಹೊರೆಯವರನ್ನು ಸಹಾಯಕ್ಕೆ ಕರೆದರು.
ಶಿಶುವನ್ನು ತಕ್ಷಣ ಮಹೇಶಗಂಜ್ ಆಸ್ಪತ್ರೆಗೆ ಕರೆದೊಯ್ದು, ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ನಂತರ ದೃಢಪಡಿಸಿದರು. ಮಗುವಿನ ತಲೆಯ ಮೇಲಿನ ರಕ್ತದ ಗುರುತುಗಳು ಹೆರಿಗೆಯಾದ ತಕ್ಷಣವೇ ಮಗುವನ್ನು ಬಿಟ್ಟು ಹೋಗಿರುವ ಸಂಕೇತವಾಗಿದೆ ಎಂದು ಅವರು ಹೇಳಿದರು.
ರಾತ್ರಿಯ ಕತ್ತಲೆಯಲ್ಲಿ ಸ್ಥಳೀಯ ಪ್ರದೇಶದವರೇ ಯಾರೋ ಮಗುವನ್ನು ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಬದ್ವೀಪ ಪೊಲೀಸರು ಮತ್ತು ಮಕ್ಕಳ ಸಹಾಯ ಕೇಂದ್ರದ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಮಗುವಿನ ದೀರ್ಘಾವಧಿಯ ಆರೈಕೆಗಾಗಿ ಕ್ರಮಗಳನ್ನು ಆರಂಭಿಸಿದ್ದಾರೆ.
ಮನುಷ್ಯತ್ವ ಮೀರಿದ ಪ್ರೀತಿ
ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದರೂ, ಪಟ್ಟಣದ ಜನರಿಗೆ ಆ ನಾಯಿಗಳ ಚಿತ್ರಣ ಮರೆಯಾಗುತ್ತಿಲ್ಲ. ಮೂಕಪ್ರಾಣಿಗಳು, ತರಬೇತಿ ಇಲ್ಲ, ಆದರೂ ನವಜಾತ ಶಿಶುವಿಗೆ ವಿಚಿತ್ರವಾಗಿ ರಕ್ಷಣೆ ನೀಡಿದ ಶ್ವಾನಗಳು. “ಇವೇ ನಾಯಿಗಳ ಬಗ್ಗೆ ನಾವು ದೂರು ನೀಡುತ್ತಿದ್ದೆವು,” ಎಂದು ಒಬ್ಬ ರೈಲ್ವೆ ನೌಕರ ಹೇಳಿದರು. “ಆದರೆ, ಈ ಮಗುವನ್ನು ತ್ಯಜಿಸಿದವರಿಗಿಂತ ಇವು ಹೆಚ್ಚು ಮನುಷ್ಯತ್ವವನ್ನು ತೋರಿಸಿವೆ ಎಂದು ಅವರು ಅಭಿಪ್ರಾಯಪಟ್ಟರು. “ಬಹುಶಃ ಆ ಸತ್ಸಂಕಲ್ಪವು ಈ ಪ್ರಾಣಿಗಳ ಮೂಲಕ ಕೆಲಸ ಮಾಡಿದೆ,” ಎಂದು ಹಿರಿಯರೊಬ್ಬರು ಹೇಳಿದರು.
ಸಂಜೆಯಾಗುತ್ತಿದ್ದಂತೆ, ರೈಲ್ವೆ ಕಾಲೋನಿಯ ಮಕ್ಕಳು ಹಿಂದಿನ ರಾತ್ರಿ ಮಗುವನ್ನು ಕಾಯ್ದ ಅದೇ ನಾಯಿಗಳಿಗೆ ಬಿಸ್ಕೆಟ್ಗಳನ್ನು ನೀಡುತ್ತಿರುವುದು ಕಂಡುಬಂದಿತು. ಒಬ್ಬ ಹದಿಹರೆಯದ ಹುಡುಗ ನಾಯಿಯನ್ನು ಮುದ್ದಿಸುತ್ತಾ, “ಅವು ಮಗುವನ್ನು ಉಳಿಸಿದವು,” ಎಂದು ಹೇಳಿದ್ದಾನೆ.
ಸಮುದಾಯದವರಿಗೆ ಇದು ಮರೆಯಲಾಗದ ರಾತ್ರಿ. ರಕ್ಷಣೆಯು ಅನಿರೀಕ್ಷಿತ ಸ್ಥಳಗಳಿಂದಲೂ ಬರುತ್ತದೆ ಮತ್ತು ಮನುಷ್ಯತ್ವವು (ಮಾನವೀಯತೆ) ಪ್ರಾಣಿಗಳಲ್ಲಿಯೂ ಇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


