ಬೆಳಗಾವಿ :
ಸಾಮಾಜಿಕ ಸಂಶೋಧನೆಯನ್ನು ವೈಜ್ಞಾನಿಕ ಮತ್ತು ನಿಖರವಾಗಿ ಮಾಡುವಲ್ಲಿ ಸಂಖ್ಯಾಶಾಸ್ತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸುಮಂತ ಹಿರೇಮಠ ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದವತಿಯಿಂದ ಶನಿವಾರ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಸಾಮಾಜಿಕ ಸಂಶೋಧನೆಯಲ್ಲಿ ಹಲವು ರೀತಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ದತ್ತ ಸಂಗ್ರಹಣೆ ಮಾಡಿದ ಅಂಕಿ ಅಂಶಗಳನ್ನು ಚಾರ್ಟ್ , ಗ್ರಾಫ್, ಟೇಬಲ್ ಇನ್ನಿತರ ರೂಪಗಳಲ್ಲಿ ತರಲು ಮತ್ತು ವಿಶ್ಲೇಷಣೆ ಮಾಡಲು ವಿದ್ಯಾರ್ಥಿಗಳಿಗೆ ಸಂಖ್ಯಾಶಾಸ್ತ್ರದ ಪ್ರಾಥಮಿಕ ತಿಳಿವಳಿಕೆ ಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದ ಅಧ್ಯಯನದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅವರು ಸಂಖ್ಯಾಶಾಸ್ತ್ರವಿಲ್ಲದೆ ಸಾಮಾಜಿಕ ಸಂಶೋಧನೆ ಅಪೂರ್ಣವಾಗಲಿದೆ. ವಿದ್ಯಾರ್ಥಿ ಜೀವನದ ಒಂದು ಭಾಗವಾಗಿ ಸಂಖ್ಯಾಶಾಸ್ತ್ರವನ್ನು ಅಧ್ಯಯನ ಮಾಡಬೇಕು ಎಂದರು.
ಡಾ. ಅಪ್ಪಣ್ಣ ಜಿರನಾಳ ಸ್ವಾಗತಿಸಿದರು. ಡಾ. ಪ್ರೀತಿ ಪದಪ್ಪಗೋಳ ಪರಿಚಯಿಸಿದರು. ಅಮೃತಾ ದಾಸೋಗ ವಂದಿಸಿದರು. ಸುಧಾ ಪಾಟೀಲ ನಿರೂಪಿಸಿದರು.