ಶಿವಮೊಗ್ಗ :
ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆ.31ರಿಂದ ವಿಮಾನಯಾನ ಸೇವೆ ಆರಂಭವಾಗುತ್ತಿದೆ. ಬಹು ವರ್ಷದ ನಿರೀಕ್ಷೆ ಕೊನೆಗೂ ಈಡೇರಲಿದೆ. ವಿಮಾನ ನಿಲ್ದಾಣವು ಶಿವಮೊಗ್ಗ ಜಿಲ್ಲೆಯ ಭವಿಷ್ಯವನ್ನೇ ಬದಲಿಸಿದೆ ಎಂಬ ಕನಸು ಇದೆ. ಈ ವಿಮಾನ ನಿಲ್ದಾಣದ ಕುರಿತು ತಿಳಿಯಬೇಕಾದ ಪ್ರಮುಖ 10 ವಿಚಾರಗಳು ಇಲ್ಲಿವೆ.
2006ರಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. ಸ್ಥಳ ಪರಿಶೀಲನೆ ನಡೆಸಲಾಯಿತು. ಆಯನೂರು ಅಥವಾ ಸೋಗಾನೆಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡುವ ಕುರಿತು ಚರ್ಚೆಯಾಗಿತ್ತು. ಅಂತಿಮವಾಗಿ ಸೋಗಾನೆಯಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. 2008 ಜೂನ್ 20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ರನ್ ವೇ ನಿರ್ಮಾಣಕ್ಕಾಗಿ ಸ್ವಲ್ಪ ದೂರದವರೆಗೆ ನೆಲ ಸಮತಟ್ಟು ಮಾಡಿದ್ದು, ವಿನಾಯಕ ನಗರದ ಪಕ್ಕದಲ್ಲಿ ಕಚೇರಿಗಾಗಿ ಕಟ್ಟಡ ನಿರ್ಮಿಸಿದ್ದು ಹೊರತು ಉಳಿದ್ಯಾವ ಕಾಮಗಾರಿಯು ಆಗಿರಲಿಲ್ಲ. ಇದೆ ಕಾರಣಕ್ಕೆ 2015ರಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನ ರದ್ದುಗೊಳಿಸಿತ್ತು. ಅಲ್ಲದೆ ಮರು ಟೆಂಡರ್ ಕರೆಯಲು ನಿರ್ಧರಿಸಿತು.
ಹಾಳು ಕೊಂಪೆ ಅಂತಾಗಿದ್ದ ವಿಮಾನ ನಿಲ್ದಾಣದ ಜಾಗದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಜೋಳ ಬೆಳೆಯಲು ಆರಂಭಿಸಿದ್ದರು. ಸ್ವಲ್ಪ ಜಾಗದಲ್ಲಿ ಜೋಳ ಒಣಗಿಸುವ ಕಣ ನಿಮಿಸಿದ್ದರು. ದನ ಕರು ಮೇಯಲು ಬಿಡುತ್ತಿದ್ದರು.
ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಮಾನ ನಿಲ್ದಾಣದ ಕನಸು ಚಿಗುರೊಡೆಯಿತು. 2020ರ ಜೂನ್ 15ರಂದು ಕಾಮಗಾರಿಗೆ ಪುನಃ ಚಾಲನೆ ನೀಡಿದರು. ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭವಾಯಿತು. ಹೈಟೆಕ್ ಟರ್ಮಿನಲ್, 3.2 ಕಿ.ಮೀ. ರನ್ ವೇ, ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಯೋಜನೆಗೆ ಅಳವಡಿಸಲಾಯಿತು.
ಎರಡು ಹಂತದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಟರ್ಮಿನಲ್, ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅತಿ ಉದ್ದನೆಯ, ಅಂತಾರಾಷ್ಟ್ರೀಯ ಗುಣಮಟ್ಟದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಇದಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಗ್ರೀನ್ ಫೀಲ್ಡ್ ಡೊಮಾಸ್ಟಿಕ್ ಏರ್ ಪೋರ್ಟ್ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕದ 9ನೇ ಡೊಮಾಸ್ಟಿಕ್ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಮಂಗಳೂರು ಜಿಲ್ಲೆಗಳಂತೆ ಶಿವಮೊಗ್ಗ ಜಿಲ್ಲೆಯೂ ಡೊಮಾಸ್ಟಿಕ್ ವಿಮಾನ ನಿಲ್ದಾಣ ಹೊಂದಿದಂತಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 4320 ಚದರ ಅಡಿಯ ಟರ್ಮಿನಲ್ ನಿರ್ಮಿಸಲಾಗಿದೆ. ಎಂತಹ ಬ್ಯುಸಿ ಸಂದರ್ಭದಲ್ಲೂ ಒಟ್ಟಿಗೆ 200 ರಿಂದ 300 ಪ್ರಯಾಣಿಕರನ್ನು ಇಲ್ಲಿ ನಿರ್ವಹಿಸಬಹುದಾಗಿದೆ. ಚೆಕ್ ಇನ್ ಕೌಂಟರ್, ವೇಯ್ಟಿಂಗ್ ಲಾಂಜ್, ಕೆಫೆಟೇರಿಯಾ, ವಿಐಪಿ ಲಾಂಜ್, ಸೆಕ್ಯೂರಿಟಿ ಚೆಕಿಂಗ್ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಈ ವಿಮಾನ ನಿಲ್ದಾಣದಲ್ಲಿದೆ.
ಪ್ರಸ್ತುತ 775 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ ಸದ್ಯ ಶಿವಮೊಗ್ಗದಲ್ಲಿರುವ ಅತಿ ಎತ್ತರದ ಕಟ್ಟಡವಾಗಿದೆ. ಇನ್ನು ಇಲ್ಲಿರುವ ರನ್ ವೇ ಏರ್ ಬಸ್ ಎ320 ಮತ್ತು ಬೋಯಿಂಗ್ 737 ಮಾದರಿಯ ದೊಡ್ಡ ವಿಮಾನಗಳು ಲ್ಯಾಂಡಿಂಗ್ ಆಗುವಷ್ಟು ಉದ್ದನೆಯದ್ದಾಗಿದೆ.
ಆ.31 ರಿಂದ ಇಂಡಿಗೋ ಸಂಸ್ಥೆಯ ವಿಮಾನ ಬೆಂಗಳೂರು – ಶಿವಮೊಗ್ಗ ಮತ್ತು ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಹಾರಾಟ ನಡೆಸಲಿದೆ. ವಾರದ ಏಳು ದಿನವು ಈ ಮಾರ್ಗದಲ್ಲಿ ವಿಮಾನ ಹಾರಾಟ ಇರಲಿದೆ.
ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಸಿದ್ಧತೆಯಾಗಿದೆ. ಇನ್ನೆರಡು ತಿಂಗಳಲ್ಲಿ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.