ಉಡುಪಿ: 2024 -25 ನೇ ಆರ್ಥಿಕ ವರ್ಷದಲ್ಲಿ ನಮ್ಮ ರಾಜ್ಯವು ದೇಶದಲ್ಲಿಯೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಠಿಯಿಂದ ವಿತ್ತೀಯ ನಿರ್ವಹಣೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೇರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಚಿವರು, ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿ, ಜಗತ್ತಿನ ಚರಿತ್ರೆಯಲ್ಲಿ ಮೊದಲ ಬಾರಿಗೆ ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರು ಉಡುಪಿಗೆ ಆಗಮಿಸಿ, ಅಜ್ಜರಕಾಡಿನಲ್ಲಿ ದೇಶ ಪ್ರೇಮಿಗಳ ಹೋರಾಟಕ್ಕೆ ಕರೆ ನೀಡಿದ್ದು ಮರೆಯಲಾಗದ ಘಟನೆ. ಅದರ ಸ್ಮಾರಕವೂ ಈ ನೆಲದಲ್ಲಿ ಇಂದು ಚಿರಸ್ಥಾಯಿಯಾಗಿದೆ. ಜಾತಿ-ಮತ ಭೇಧವಿಲ್ಲದೇ ಉಡುಪಿ ಜಿಲ್ಲೆಯ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯಂತಹ ನಾಯಕರ ಕರೆಗೆ ಓಗೊಟ್ಟು ಭಾಗವಹಿಸಿರುವುದು ಸದಾ ಮರೆಯಲಾಗದ ಐತಿಹಾಸಿಕ ಘಟನೆ ಎಂದು ಸಚಿವರು ಸ್ಮರಿಸದರು.
ಎಲ್ಲಾ ಮಾಸಿಕ ಪಿಂಚಣಿ ಯೋಜನೆಗಳನ್ನು ಡಿಬಿಟಿ ವ್ಯಾಪ್ತಿಗೆ ತರುವುದರೊಂದಿಗೆ ಪ್ರತಿ ಮಾಹೆ ರಾಜ್ಯದಲ್ಲಿ ಅಂದಾಜು 82.57 ಲಕ್ಷ ಫಲಾನುಭವಿಗಳಿಗೆ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆ ಯೋಜನೆಯಡಿ ನೇರವಾಗಿ ಜಮೆ ಮಾಡಲಾಗುತ್ತಿದೆ. ನೈಸರ್ಗಿಕ ವಿಕೋಪಗಳಿಂದ ತತ್ತರಿಸಿದ ರೈತರಿಗೆ ಕ್ಷಿಪ್ರ, ಪಾರದರ್ಶಕ ಹಾಗೂ ನಿಖರವಾದ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಪರಿಹಾರ ತಂತ್ರಾಂಶವನ್ನು ಉನ್ನತೀಕರಿಸಿ, ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಭೂದಾಖಲೆಗಳು ದಶಕಗಳಿಂದ ಕಗ್ಗಂಟಿನಲ್ಲಿದ್ದು, ಜನರು ತಾಲೂಕು ಕಚೇರಿಗೆ ಅಲೆಯಬೇಕಿತ್ತು. ಇದಕ್ಕೆ ಪರಿಹಾರವಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರೊಂದಿಗೆ ಸುರಕ್ಷಿತಗೊಳಿಸಲಾಗುತ್ತಿದೆ.
ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮುಂದುವರೆಸಿಕೊಂಡು ಹೋಗುತ್ತಿರುವ ನಮ್ಮ ಸರ್ಕಾರದ ಕಾರ್ಯವೈಖರಿಗೆ ದೇಶ-ವಿದೇಶಗಳ ತಜ್ಞರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬಡತನ ನಿವಾರಣೆಗೆ ನೇರ ನಗದು ನೀಡುವ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ 1.23 ಕೋಟಿ ಫಲಾನುಭವಿಗಳಿಗೆ ಈವರೆಗೆ 47,400 ಕೋಟಿ ರೂ. ಗಳಷ್ಟು ಜಮಾ ಮಾಡಲಾಗಿದೆ. ಜಿಲ್ಲೆಯಲ್ಲಿ 2,25,131 ಫಲಾನುಭವಿಗಳಿಗೆ 870.83 ಕೋಟಿಯಷ್ಟು ಹಣ ಸಂದಾಯ ಮಾಡಲಾಗಿದೆ. ಅಕ್ಕ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸುವುದರೊಂದಿಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಸದಸ್ಯರನ್ನಾಗಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.
ಅಂಗನವಾಡಿಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ನಡೆಸಲು 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 4 ರಿಂದ 5 ಸಾವಿರ ಅಂಗನವಾಡಿಗಳಲ್ಲಿ ಸದ್ಯದಲ್ಲಿಯೇ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ಜಿಲ್ಲೆಯಲ್ಲಿ 151 ಕೋಟಿ ವೆಚ್ಚದಲ್ಲಿ ಉಪ್ಪು ನೀರು ತಡೆ ಆಣೆಕಟ್ಟು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ ಸುಮಾರು 192.52 ಹೆಕ್ಟೇರ್ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹಕ್ಕಾಗಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ.
ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪರಿಶೀಲನಾ ಹಂತದಲ್ಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ 4 ಇಂದಿರಾ ಕ್ಯಾಂಟೀನ್ ಗಳು ಬಡವರ ಹಸಿವನ್ನು ನೀಗಿಸುತ್ತಿದ್ದು, ಬೈಂದೂರು ಪಟ್ಟಣ ಪಂಚಾಯತ್ ಹಾಗೂ ಕಾಪು ಪುರಸಭಾ ವ್ಯಾಪ್ತಿಯಲ್ಲಿ 2 ಹೊಸದಾಗಿ ಇಂದಿರಾ ಕ್ಯಾಂಟೀನ್ಳಿಗೆ ಕಳೆದ ಜೂನ್ ಮಾಹೆಯಲ್ಲಿ ಚಾಲನೆ ನೀಡಿದ್ದೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಹುಮುಖ್ಯ ಕ್ಷೇತ್ರವನ್ನಾಗಿ ರೂಪಿಸಲು ವಿಶೇಷ ಮುತುವರ್ಜಿ ವಹಿಸಲಾಗಿದೆ. ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಶಿವಪುರ, ಕೆರೆಬೆಟ್ಟು, ನಿಟ್ಟೆ, ಉಪ್ಪೂರು, ಸಾಂತೂರು ಹಾಗೂ ಎಲ್ಲೂರು ಗ್ರಾಮಗಳಲ್ಲಿ ಒಟ್ಟು 1207.34 ಎಕ್ರೆ ಜಮೀನನ್ನು ಗುರುತಿಸಲಾಗಿದ್ದು, ಇವು ಪ್ರಗತಿಯ ಹಂತದಲ್ಲಿವೆ ಎಂದರು.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ‘ಮೌಲಾನಾ ಅಬ್ದುಲ್ ಕಲಾಂ ಅಜಾದ್ ಪ್ರತಿಭಾ ಪುರಸ್ಕಾರ’ ನೀಡಿ ಸಚಿವರು ಗೌರವಿಸಿದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವೀಕ್ಷಿಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿ ಹಾಡುಗಳಿಗೆ ನೃತ್ಯ ಮಾಡಿದರು. ಬಳಿಕ ಪಥ ಸಂಚಲನ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ಶಾಲಾ ತಂಡಗಳಿಗೆ ಸಚಿವರು ಬಹುಮಾನ ವಿತರಿಸಿದರು.
ಈ ವೇಳೆ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬಿಜೆಪಿಯವರು ಮಾಡಿದ ಮತಗಳ್ಳತನದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಹಿನ್ನಡೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಡುಪಿಯ ಕೆ.ಎಂ.ಮಾರ್ಗ ಬಳಿಯಿರುವ ಎಲ್ಐಸಿ ಡೈಮಂಡ್ ಜುಬಿಲಿ ಹಾಲ್ನಲ್ಲಿ ಶುಕ್ರವಾರ ನಡೆದ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ 50ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿಲ್ಲ ಎಂದರು.
ವಿಧಾನಸಭೆ ಚುನಾವಣೆಯಲ್ಲಿ135 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ನಮಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಯಿತು. ಇದಕ್ಕೆ ಕಾರಣ ಮತಗಳ್ಳತನ. ಮುಂದೆ ನಡೆಯುವ ಬಿಹಾರ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಸೋಲಿಸುವ ಸಲುವಾಗಿ ಈಗಾಗಲೇ 85 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಕೈಬಿಟ್ಟ ಮತದಾರರ ಪಟ್ಟಿಯನ್ನು ನೀಡದೆ, ಚುನಾವಣಾ ಆಯೋಗ ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸುತ್ತಿದೆ ಎಂದು ಸಚಿವರು ಆರೋಪಿಸಿದರು.
ಭಾರತದ ಇತಿಹಾಸ ಬೇರೆ ಅಲ್ಲ, ಕಾಂಗ್ರೆಸ್ ಇತಿಹಾಸ ಬೇರೆ ಅಲ್ಲ, ನಮ್ಮ ಯುವಕರ ಸಾಮರ್ಥ್ಯ ಬೇರೆ ಅಲ್ಲ, ಕಾಂಗ್ರೆಸ್ ಪಕ್ಷದ ಸಾಮರ್ಥ್ಯ ಬೇರೆ ಅಲ್ಲ. ಇಂದು ನೀವೆಲ್ಲ 50ನೇ ವರ್ಷದ ಸಂಭ್ರಮದಲ್ಲಿದ್ದೀರಿ. 50 ವರ್ಷದ ಈ ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷದ ಇತಿಹಾಸಕ್ಕೆ ಯುವ ಕಾಂಗ್ರೆಸ್ ಸಾಕ್ಷಿಯಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿರಬಹುದು.
ಆದರೆ ಅದು ಶಾಶ್ವತವಲ್ಲ, ನಿಮ್ಮೆಲ್ಲರ ಈಗಿನ ಉತ್ಸಾಹ ನೋಡಿದರೆ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಪಕ್ಷ ಪುಟಿದೇಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಎಲ್ಲರೂ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಬಹಳಷ್ಟು ಯುವಕರಿಗೆ ತಮ್ಮ ಶಕ್ತಿಯ ಅರಿವಿಲ್ಲ. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು. ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನೀವು ಮಾಡುವ ಕೆಲಸಗಳು ಜನರ ಮನಸ್ಸನ್ನು ಗೆಲ್ಲಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಮಾರಂಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಎಂ.ಎ.ಗಫೂರ್, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಕಿಶನ್ ಶೆಟ್ಟಿ, ಹರೀಶ್ ಕಿಣಿ, ದೀಪಕ್ ಕೋಟ್ಯಾನ್, ಭುಜಂಗ ಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖೆಯಿಂದ ಸತ್ಯಾಸತ್ಯತೆ ಬೆಳಕಿಗೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಎಸ್ ಐಟಿ ತನಿಖೆಯಿಂದ ಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವುದು ಸಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದರು.
ಧರ್ಮಸ್ಥಳ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು, ಈ ವಿಚಾರವಾಗಿ ಡಿಸಿಎಂ ಅವರ ಹೇಳಿಕೆಗೆ ನನ್ನ ಸಹಮತವಿದೆ. ಎಸ್ ಐ ಟಿ ತನಿಖೆ ಬಗ್ಗೆ ಅಧಿಕಾರಿಗಳು ಗೃಹಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳನ್ನು ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ಸೌಜನ್ಯಳಿಗೆ ಅನ್ಯಾಯ ಆಗಿದ್ದರೆ, ನ್ಯಾಯ ಸಿಗಬೇಕು ಮುಸಕುದಾರಿ ಬೇರೆ ಬೇರೆ ಸ್ಥಳವನ್ನು ಗುರುತು ಮಾಡುತ್ತಿದ್ದಾನೆ. ಇದಕ್ಕೆಲ್ಲಾ ಉತ್ತರ ಸಿಗಬೇಕು ಎಂದೆ ಎಸ್ ಐ ಟಿ ರಚನೆಯಾಗಿದೆ. ಆದಷ್ಟು ಬೇಗ ಉತ್ತರ ಸಿಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸುಜ್ಞಾನ ಸಭಾಂಗಣ ಉದ್ಘಾಟಿಸಿ, ಮಕ್ಕಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಿಸಿದ ಸಚಿವರು
ವಿದ್ಯಾರ್ಥಿಗಳು ಕೇವಲ ಪಠ್ಯಗಳಿಗೆ ಮೀಸಲಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ತಂದೆ ತಾಯಿ ಕಂಡ ಕನಸನ್ನು ನನಸಾಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕರೆ ನೀಡಿದರು.
ಉಡುಪಿಯ ಅಂಚೆ ಪರ್ಕಳದಲ್ಲಿರುವ ಶೆಟ್ಟಿಬೆಟ್ಟು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸುಜ್ಞಾನ ಸಭಾಂಗಣವನ್ನು’ ಉದ್ಘಾಟಿಸಿ, ಬಳಿಕ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದ ಸಚಿವರು, ಶೈಕ್ಷಣಿಕ ಮೂಲಸೌಕರ್ಯ ಬೆಳೆಸುವುದು ಇಂದಿನ ಅತ್ಯಗತ್ಯ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ಹಿರಿಯರನ್ನು ಆದರ್ಶ ವಾಗಿ ಇಟ್ಟುಕೊಳ್ಳಬೇಕು. ಮಕ್ಕಳೇ ಆಗಲಿ, ಹಿರಿಯರೇ ಆಗಲಿ ಕಲಿಕೆ ಎಂಬುದು ಮುಖ್ಯವಾಗಬೇಕು. ನಾನು 22 ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದೆ. ಕಳೆದ 25 ವರ್ಷಗಳಲ್ಲಿ ವಿವಿಧ ಹಂತಕ್ಕೇರಿ ಇಂದು ರಾಜ್ಯದ ಸಚಿವೆಯಾಗಿರುವೆ ಎಂದು ಹೇಳಿದರು .
ಸಭಾಂಗಣಕ್ಕೆ ಸುಜ್ಞಾನ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುತ್ತದೆ ಉಡುಪಿ ಜನ ಬುದ್ದಿವಂತರು ಅಂತ. ಜ್ಞಾನವೆಂದರೆ ಬೆಳಕು, ಸುಜ್ಞಾನವೆಂದರೆ ಬೆಳಕಿನ ಪ್ರಕರತೆ ದಟ್ಟವಾದ ಪ್ರಖರವಾದ ಬೆಳಕಿನೆಡೆಗೆ ಇಲ್ಲಿಯ ಕುಡಿಗಳು ಮುನ್ನಡೆದರೆ ಕರ್ನಾಟಕದ ಹೆಮ್ಮೆಯ ಶಿಕ್ಷಣ ಭವನ ಸುಜ್ಞಾನ ಭವನ ಆಗುತ್ತದೆ, ಹಾಗಾಗಲಿ ಎಂದು ಕೃಷ್ಣನಲ್ಲಿ ಬೇಡಿಕೊಳ್ಳುತ್ತೇನೆ ಎಂದರು.
ಇವತ್ತಿನ ದಿನಗಳಲ್ಲಿ ಮೊಬೈಲ್ ಎಂಬ ಹೂವಿನೊಳಗೆ ಮಕ್ಕಳು ಮಕರಂದವನ್ನು ಹೀರುತ್ತಿದ್ದಾರೆ. ನಾಳೆ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಕಳೆದುಹೋಗುತ್ತದೆ. ಪುನಃ ಮರಳಿ ಬರುವುದಿಲ್ಲ. ಹಾಗಾಗಿ ಮಕ್ಕಳು, ಪಾಲಕರು, ಶಿಕ್ಷಕರು ಸೇರಿದಂತೆ ನಾವೆಲ್ಲ ಬಹಳಷ್ಟು ಯೋಚಿಸಬೇಕಾದ ಸಂದರ್ಭದಲ್ಲಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ನ ಸಿಇಒ ಪ್ರತೀಕ್ ಬಾಯಲ್, ಡಿಡಿಪಿಐ ಲೋಕೇಶ್, ಬಿಇಒ ಶಬಾನಾ ಅಂಜುಂ, ಅಶ್ವಿನಿ ಪೂಜಾರಿ, ಸುಕೇಶ್ ಕುಂದರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಮಜೂರು ಗ್ರಾಮ ಪಂಚಾಯತ್ ನ ನವೀಕೃತ ಸಭಾ ಭವನದ ಉದ್ಘಾಟನೆ
ಭಾರತ ದೇಶ ಹಳ್ಳಿಗಳ ದೇಶ, ಗ್ರಾಮಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾದಂತೆ. ಗ್ರಾಮಗಳ ವಿಕಸನವೇ ರಾಜೀವ್ ಗಾಂಧಿ ಅವರ ಕನಸಾಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್, ಕಾಪು ತಾಲೂಕು ಪಂಚಾಯತ್ ವತಿಯಿಂದ ಮಜೂರು ಗ್ರಾಮ ಪಂಚಾಯತ್ ನ ನವೀಕೃತ ಸಭಾ ಭವನದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಮಾಡಬಾರದು, ಇದಕ್ಕಾಗಿಯೇ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಗಳ ಚಿಹ್ನೆ ಇರುವುದಿಲ್ಲ ಎಂದರು.
ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಹೊಣೆಗಾರಿಕೆ ಅತ್ಯಂತ ಪ್ರಮುಖವಾದದ್ದು. ಇದು ಪರಿಣಾಮಕಾರಿ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದರು. ಗ್ರಾಮಗಳು ಸಬಲೀಕರಣಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಸಹ ಪಂಚಾಯಿತಿ ವ್ಯವಸ್ಥೆಗೆ ಬಲ ತುಂಬಲಾಯಿತು. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಬಲವರ್ಧನೆಯಾಗಿದೆ. ಬೀದಿ ದೀಪಗಳ ಬಿಲ್ ತುಂಬುವ ಶಕ್ತಿಯೂ ಇಲ್ಲದ ಪಂಚಾಯಿತಿಗಳು ಇಂದು ಸಾಕಷ್ಟು ಅನುದಾನ ಪಡೆಯುತ್ತಿವೆ ಎಂದರು.
ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಗೆ ಯಾವುದೇ ಕೆಲಸ ಅರಸಿ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿತ್ತು. ಆದರೆ, ಈಗ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದಲೇ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಉಪ ವಿಭಾಗಧಿಕಾರಿ ರಶ್ಮಿ, ತಹಶಿಲ್ದಾರ್ ಡಾ.ಪ್ರತಿಭಾ, ತಾಲೂಕು ಪಂಚಾಯತ್ ಸಿಇಒ ಜೇಮ್ಸ್ವಡಿ’ಸಿಲ್ವ, ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಅಂಗನವಾಡಿಗಳು ಆರಂಭವಾಗಿ 50 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ಹೊತ್ತಿಗೆ ಸುವರ್ಣ ಮಹೋತ್ಸವ ಆಚರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾಪು ತಾಲೂಕು ಪಂಚಾಯತ್ ವತಿಯಿಂದ ಎಲ್ಲೂರಿನ ದುರ್ಗಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಕೆಜಿ ಹಾಗೂ ಯುಕೆಜಿಯನ್ನು ಪ್ರಾರಂಭಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಹಂತ ಹಂತವಾಗಿ ಎಲ್ಲಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಉಪ ವಿಭಾಗಧಿಕಾರಿ ಎಸ್.ಆರ್. ರಶ್ಮಿ, ತಹಶಿಲ್ದಾರ್ ಪ್ರತಿಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ಯಾಮಲಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.