ರಾಯಬಾಗ: ತಹಶೀಲ್ದಾರ್ ಸುರೇಶ ಮುಂಜೆ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ನೌಕರರು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಿಂದ ಝಂಡಾ ಕಟ್ಟೆವರೆಗೆ ಮೆರವಣಿಗೆ ನಡೆಸಿ, ರಸ್ತೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.
ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಪೋಳ ಮಾತನಾಡಿ, ತಹಶೀಲ್ದಾರ್ ಅವರು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರೈತ ಸಂಘದ ಮುಖಂಡರು ಎಂದು ಹೇಳಿಕೊಂಡು ಕೆಲವರು ತಾಲೂಕಿನ ಕಂಕಣವಾಡಿ ಗ್ರಾಮದ ಜಮೀನಿಗೆ ಸಂಬಂಧಿಸಿದ ವಿಷಯವಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ತಹಶೀಲ್ದಾರ್ ಈ ಜಮೀನಿನ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ಅದರಲ್ಲಿ ಯಾವುದೇ ವಹಿವಾಟು ಮಾಡಲು ಬರುವುದಿಲ್ಲ ಮತ್ತು ತಾವು ಕಚೇರಿ ಕೆಲಸ ನಿಮಿತ್ತ ಬೆಂಗಳೂರಿನ ಹೈಕೋರ್ಟ್ಗೆ ಹೋಗುತ್ತಿದ್ದು, ಬಂದ ನಂತರ ಪರಿಶೀಲಿಸುವುದಾಗಿ ಸೌಜನ್ಯದಿಂದ ಹೇಳಿದ್ದಾರೆ. ಆದರೆ ಆರೋಪಿಗಳು ತಹಶೀಲ್ದಾರರಿಗೆ ಏರು ಧ್ವನಿಯಲ್ಲಿ ಏಕವಚನದಲ್ಲಿ ನಿಂದಿಸಿ, ಕಚೇರಿ ಮುಖ್ಯದ್ವಾರವನ್ನು ಬಂದ್ ಮಾಡಿ, ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದನ್ನು ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಇಂತಹ ಕಹಿ ಘಟನೆಯಿಂದ ತಾಲ್ಲೂಕಿನ ಸರ್ಕಾರಿ ನೌಕರರಲ್ಲಿ ಭೀತಿಯುಂಟಾಗಿದ್ದು, ಈ ರೀತಿಯ ಗೂಂಡಾ ವರ್ತನೆಯಿಂದ ಸರ್ಕಾರಿ ನೌಕರರ ಮಾನಸಿಕ ಸ್ಥೆರ್ಯ ಕುಸಿಯುತ್ತಿದೆ. ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.