ಅಯೋಧ್ಯೆ :
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಜನವರಿ 15 ರಿಂದ ಪ್ರಾರಂಭವಾಗಲಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಪ್ರತಿಷ್ಠಾಪನೆ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಮುಂದಿನ ವರ್ಷದ ಜನವರಿ 15ರಿಂದ ಫೆಬ್ರವರಿ 15ರವರೆಗೆ ಉಚಿತ ಅನ್ನಸಂತರ್ಪಣೆ ಮತ್ತು ವಸತಿ ಏರ್ಪಡಿಸಲಾಗುತ್ತದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಚಳಿಗಾಲ ಇರುವುದರಿಂದ ಭಕ್ತರಿಗೆ ಬೆಚ್ಚನೆ ಹೊದಿಕೆ ಒದಗಿಸಲಾಗುವುದು. ಚಳಿ ಕಾಯಿಸಿಕೊಳ್ಳಲು ಅಲ್ಲಲ್ಲಿ ಬೆಂಕಿ ಉರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ರಾಮಮಂದಿರದ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ಶನಿವಾರ ಮತ್ತು ಭಾನುವಾರ ಸರಣಿ ಸಭೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.