ಬೆಳಗಾವಿ : ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ಕಲ್ಲೊಳ್ಳಿ ಇದರ ಉದ್ಘಾಟನೆ ಸಮಾರಂಭ ಇಂದು ಸಂಜೆ 4 ಗಂಟೆಗೆ ಕಲ್ಲೋಳ್ಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಮೈದಾನದಲ್ಲಿ ನೆರವೇರಲಿದೆ.
ಕೊಲ್ಲಾಪುರ ಕಣೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ವಿ.ಸೋಮಣ್ಣ ಮುಖ್ಯ ಅತಿಥಿಯಾಗಿ ಆಗಮಿಸುವರು. ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಗಣ್ಯಮಾನ್ಯರು ಉಪಸ್ಥಿತರಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
‘ಗ್ರಾಮೀಣ ಜನರ ಕಾಮಧೇನು ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ’
ಸರಳತೆಯ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಮೃತ ಹಸ್ತದಿಂದ ಫೆಬ್ರುವರಿ 16 2002 ರಲ್ಲಿ ಕಲ್ಲೋಳಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಗುರಿಯೊಂದಿಗೆ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ಪ್ರಾರಂಭವಾಯಿತು.
ಆರಂಭದಲ್ಲಿ ಕೇವಲ 320 ಸದಸ್ಯರು, ರೂ.3.22 ಲಕ್ಷ ಶೇರು ಬಂಡವಾಳದೊಂದಿಗೆ ಸಂಸ್ಥೆಯು ಪ್ರಾರಂಭವಾಯಿತು. 10 ಚದರ ಅಡಿಯ ಸಣ್ಣ ಕೊಠಡಿಯನ್ನು ಬಾಡಿಗೆಗೆ ಪಡೆದು ತನ್ನ ಸಹಕಾರಿಯ ವ್ಯವಹಾರಿಕ ಪಯಣವನ್ನು ಪ್ರಾರಂಭಿಸಿತು. ಸಹಕಾರಿ ಸಂಘವು ಮೊದಲ ವರ್ಷದ ಕೊನೆಯಲ್ಲಿ ರೂ.61 ಸಾವಿರ ಠೇವು, ರೂ. 4.06 ಲಕ್ಷ ದುಡಿಯುವ ಬಂಡವಾಳ ಕ್ರೋಢಿಕರಿಸಿ ಸುಮಾರು 20 ಸಾವಿರ ರೂಪಾಯಿ ಲಾಭವನ್ನು ಗಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಘ ಬೆಳೆಯುವ ಭರವಸೆ ಮೂಡಿಸಿತು. 2008ರಲ್ಲಿ ಸಹಕಾರಿ ಕಾನೂನಿನಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ಸೌಹಾರ್ದ ಸಹಕಾರಿಯಾಗಿ ಪರಿವರ್ತನೆಗೊಂಡಿತು. ಸದ್ಯ 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ. ‘ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ರೂ.89.44 ಕೋಟಿ ಸಾಲವನ್ನು ನೀಡಿದೆ ಹಾಗೂ ಪ್ರಾರಂಭದ ವರ್ಷದಿಂದ ಈವರೆಗೆ ಶೇ.100ರಷ್ಟು ಸಾಲ ವಸೂಲಾತಿ ಹೊಂದಿದ್ದು, ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದರು.
ನೂತನ ಕಟ್ಟಡ: ಗ್ರಾಹಕರ ಅನುಕೂಲಕ್ಕಾಗಿ ಕಲ್ಲೋಳಿಯ ಪಟ್ಟಣದ ಕೇಂದ್ರ ಸ್ಥಳದಲ್ಲಿ ಸುಸಜ್ಜಿತವಾದ ಮತ್ತು ಗ್ರಾಹಕರ ಸೌಲಭ್ಯಕ್ಕಾಗಿ ಕಟ್ಟಡವನ್ನು ನಿರ್ಮಿಸಿದೆ. ಶ್ರೀ ಮಹಾಲಕ್ಷ್ಮಿ ಸಹಕಾರಿ ಸಂಘವು ಪ್ರತಿ ವರ್ಷ ಗ್ರಾಹಕರಿಗೆ ಲಾಭಾಂಶ ವಿತರಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 20ರಷ್ಟು ಲಾಭಾಂಶ ವಿತರಿಸಿದೆ. ಪ್ರಾರಂಭದಿಂದ ಅಡಿಟ್ದಲ್ಲಿ ‘ಅ’ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸ ಗಳಿಸಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ.
ಸಮರ್ಥ ತಂತ್ರಜ್ಞಾನ ಮತ್ತು ಪರಿಣಿತ ಸಿಬ್ಬಂದಿಯೊAದಿಗೆ ವಿಶಾಲ ಮತ್ತು ಸುಸ್ಥಿರ ಹಣಕಾಸು ಸಂಸ್ಥೆಯಾಗಿ ಬೆಳಯುವುದು ಸಹಕಾರಿ ಸಂಸ್ಥೆಯ ಮುಂದಿನ ಗುರಿಯಾಗಿದೆ. ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸೊಸೈಟಿಯು ಎಲ್ಲ ವ್ಯವಹಾರವನ್ನು ಗಣಿಕೀಕೃತ ವ್ಯವಹಾರಕ್ಕಾಗಿ ಅಳವಡಿಸಿದೆ. ಆರ್ಟಿಜಿಎಸ್, ನೆಪ್ಟ್ ಮತ್ತು 100 ಯುನಿಟ್ಗಳ ಸೇಪ್ ಲಾಕರ್ ವ್ಯವಸ್ಥೆಯನ್ನು ಹೊಂದಿದೆ. ಸಣ್ಣ ಪ್ರಮಾಣದ ಉಳಿತಾಯ ಮಾಡುವ ಗ್ರಾಹಕರಿಗಾಗಿ ಆರ್.ಡಿ ಯೋಜನೆಯನ್ನು ಹೊಂದಿದೆ. ಮಹಿಳೆಯರಿಗಾಗಿ, ಸೈನಿಕರಿಗಾಗಿ, ಹಿರಿಯ ನಾಗರಿಕರಿಗಾಗಿ ಠೇವುಗಳ ಮೇಲೆ 0.50% ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಸಣ್ಣ ವ್ಯಾಪಾರಸ್ಥರಿಗಾಗಿ 12% ಬಡ್ಡಿ ದರದಲ್ಲಿ ವ್ಯಾಪಾರ ಅಭಿವೃದ್ದಿ ಸಾಲವನ್ನು ನೀಡುತ್ತಿದೆ. ಗ್ರಾಮೀಣ ಮಹಿಳಾ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮಿ ಸಹಕಾರಿ ಸಂಘವು ಹೆಚ್ಚು ಗಮನ ನೀಡಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಕಲ್ಪಿಸುವ ಬಗ್ಗೆ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ.
ಸಾಮಾಜಿಕ ಸೇವೆ: ಆರ್ಥಿಕ ವ್ಯವಹಾರದೊಂದಿಗೆ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘವು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ, ಧಾರ್ಮಿಕ ಕ್ಷೇತ್ರಗಳಿಗೆ ಸಹಾಯ, ರೈತರಿಗೆ ತರಬೇತಿ, ವಿವಿಧ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಗಮನ ಸೆಳೆದಿದೆ. ಸಹಕಾರಿ ಸಂಘವು ಗ್ರಾಮೀಣ ಪ್ರದೇಶದ ಜನರಿಗೆ ಆಧುನಿಕ ಆರ್ಥಿಕ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನವಿನ ಪ್ರಕಾರದ ಹೂಡಿಕೆಯ ಅವಕಾಶಗಳನ್ನು ಗ್ರಾಹಕರಿಗೆ ತಿಳಿಸುವ ಮೂಲಕ ಆರ್ಥಿಕ ಸಶಕ್ತಿಕರಣಕ್ಕಾಗಿ ಗ್ರಾಮೀಣ ಭಾಗದ ಬೆಟಗೇರಿ, ಘಟಪ್ರಭಾ, ಯಾದವಾಡದಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದೆ.
ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ ಸೇ ಸಮೃದ್ದಿ ಎಂಬ ಘೋಷಣೆಯೊಂದಿಗೆ ಸಂಸ್ಥೆಯು ನಡೆದು ಬಂದಿದ್ದು, ಪ್ರಧಾನಿಯವರ ಕನಸಿನ ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಮತ್ತು ಜಗತ್ತಿನ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಭಾರತ ಹೊಮ್ಮಬೇಕೆನ್ನುವ ಅವರ ಯೋಜನೆಗೆ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಸ್ಥೆಯು ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.
ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘವು ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತವಾದ, ಗಣಿಕಿಕೃತ ಮತ್ತು ಗ್ರಾಹಕರ ಸ್ನೇಹಿಯಾಗಿರುವ ಕಟ್ಟಡದ ಉದ್ಘಾಟನೆಯು ಅ. 4 (ಶನಿವಾರ)ರಂದು ಸಂಜೆ 4.00 ಗಂಟೆಗೆ ನಾಡಿನ ಶ್ರೀಗಳ ಸಾನ್ನಿಧ್ಯ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಜರುಗಲಿದೆ.