ವಿಜಯಪುರ: ಬಸವನಬಾಗೇವಾಡಿ ತಾಲೂಕು ಮನಗೂಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಚಿನ್ ಕುಮಾರ್ ಪಾಟೀಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಬ್ಬರು ನೀಡಿರುವ ದೂರಿನ ಮೇರೆಗೆ ಪ್ರಾಚಾರ್ಯನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಜುಲೈಯಲ್ಲಿ ಈತ ಕೃತ್ಯ ನಡೆಸಿದ್ದಾನೆ. ಜನವರಿ 2 ರಂದು ವಿದ್ಯಾರ್ಥಿನಿಯರು ಈ ಬಗ್ಗೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಾಚಾರ್ಯ ವಿದ್ಯಾರ್ಥಿನಿಯರ ಮೈಕೈ ಮುಟ್ಟುವುದು, ಅಪ್ಪಿಕೊಳ್ಳುವುದು, ಪ್ರತಿರೋಧ ಮಾಡಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಹೆದರಿಸುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆತನ ಕಿರುಕುಳಕ್ಕೆ ತುತ್ತಾದ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ಅರ್ಧಕ್ಕೆ ಕಾಲೇಜು ಬಿಟ್ಟು ಬಂದಿದ್ದಳು. ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ಒಂದು ವಿಷಯದಲ್ಲಿ ಅನುತ್ತೀರ್ಣ ಮಾಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದರೆ ನೀನು ಸಹಕರಿಸಿದರೇ ಕಾಲೇಜಿಗೆ ಟಾಪರ್ ಮಾಡುತ್ತೇನೆ. ಮುಂದೆ ಉದ್ಯೋಗ ಪಡೆಯಲು ನೆರವಾಗುವುದಾಗಿ ಆತ ಉತ್ತರಿಸಿದ್ದ. ಮಾತ್ರವಲ್ಲ ಈ ವಿದ್ಯಾರ್ಥಿಗಳಿಗೆ instagram ನಲ್ಲೂ ಮೆಸೇಜ್ ಮಾಡುತ್ತಿದ್ದ. ಮತ್ತೊಬ್ಬ ವಿದ್ಯಾರ್ಥಿನಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಹೋದಾಗ ಕಿರುಕುಳ ನೀಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.