ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಮಂದಿ ಆರೋಪಿಗಳ ವಿಚಾರಣೆಯನ್ನು ನಾಲ್ಕನೇ ಶುಕ್ರವಾರ ದಿನವಾದ ಸಹ ಪೊಲೀಸರು ನಡೆಸಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ದರ್ಶನ್ ಗದ್ಗದಿತರಾಗುತ್ತಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರು ವಿಚಾರಿಸಿದಾಗ ಏನೋ ಆಗೋಯ್ತು ಸರ್…ಎಂದು ಕಣ್ಣುಂಬಿಕೊಂಡಿದ್ದಾರೆ. ಆದರೆ ದರ್ಶನ್ ಗೆಳತಿ ಪವಿತ್ರಾಗೌಡ ಮಾತ್ರ ಹಟಮಾರಿ ಧೋರಣೆ ತೋರುತ್ತಿದ್ದಾರೆ.
30 ಲಕ್ಷ ಕೊಟ್ಟಿದ್ದು ಸ್ವತಃ ದರ್ಶನ್ :
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಹೇಳದೆ ಪೊಲೀಸರಿಗೆ ಶರಣಾಗತಿಯಾಗುವ 4 ಸಹಚರರಿಗೆ ನೀಡುವಂತೆ ಖುದ್ದು ನಟ ದರ್ಶನ್ ತಮ್ಮ ಮನೆಯಲ್ಲೇ 30 ಲಕ್ಷ ರು. ನೀಡಿದ್ದರು.
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ಅನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ವಿಚಾರಣೆಗೆ ಕೊಸರಾಡುತ್ತಿದ್ದ ಆರೋಪಿಗಳು ಬಳಿಕ ಕೃತ್ಯದಲ್ಲಿ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ ಎಂದು ಗೊತ್ತಾಗಿದೆ.
ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾದ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ದರ್ಶನ್ ಪ್ರಿಯತಮೆ ಪವಿತ್ರಾಗೌಡ ಸ್ಪಂದಿಸದೇ ಹಟಮಾರಿತನ ತೋರಿಸಿದ್ದಾಳೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಕುರಿತು ಆಕೆ ಸೂಕ್ತವಾಗಿ ಉತ್ತರಿಸುತ್ತಿಲ್ಲ.ಈ ಬಗ್ಗೆ ಹೆಚ್ಚಾಗಿ ಪ್ರಶ್ನಿಸಿದರೆ ತನಗೇನೂ ಗೊತ್ತಿಲ್ಲವೆಂದು ಪವಿತ್ರಾ ಹೇಳುತ್ತಿದ್ದಾಳೆ. ದರ್ಶನ್ ಸೇರಿದಂತೆ ಉಳಿದ ಎಲ್ಲ ಆರೋಪಿಗಳು ವಿಚಾರಣೆಗೆ ಸ್ಪಂದಿಸಿದರೆ ಆಕೆ ಮಾತ್ರ ಅಸಹಕಾರ ತೋರಿದ್ದಾಳೆ ಎಂದು ಮೂಲಗಳು ಹೇಳಿವೆ.
ಆದರೆ, ದರ್ಶನ್
ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತನಗೆ ಒದಗಿದ ಪರಿಸ್ಥಿತಿ ನೆನೆದು ಗದ್ಗದಿತರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಠಾಣೆಗೆ ಶರಣಾಗುವಂತೆ ಹೇಳಿ ಕೆಲ ಆರೋಪಿಗಳಿಗೆ ನಟ ದರ್ಶನ್ ನೀಡಿದ್ದ ರೂ.30 ಲಕ್ಷ ಹಣವನ್ನು ಪಶ್ಚಿಮ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಬಚಾವಾಗಲು ದರ್ಶನ್ ಮತ್ತಷ್ಟು ಮಂದಿಗೆ ₹5 ಕೋಟಿಯಷ್ಟು ಆಮಿಷವೊಡ್ಡಿದ್ದರು ಎಂಬ ಮಾಹಿತಿ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಜೂನ್ 8ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣದಿಂದ ಪಾರಾಗಲು ಆರೋಪಿಗಳಿಗೆ ದರ್ಶನ್ ₹30 ಲಕ್ಷ ನೀಡಿದ್ದರು. ಹಣ ಪಡೆದಿದ್ದ ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ಇತರರು, ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡು ಠಾಣೆಗೆ ಬಂದಿದ್ದರು. ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಪತ್ತೆಯಾಯಿತು. ಆರೋಪಿಗಳಿಂದ ಪೂರ್ಣ ನಗದು, ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಜಪ್ತಿ ಮಾಡಲಾಗಿದೆ.
ತನಿಖೆ ಚುರುಕುಗೊಳಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ದರ್ಶನ್ ಹಾಗೂ ಸಹಚರರು, ಪಟ್ಟಣಗೆರೆ ಶೆಡ್ನಲ್ಲಿ ಹಲವು ಬಾರಿ ವಾರಾಂತ್ಯಗಳನ್ನು ಕಳೆದಿದ್ದರು. ಇದೇ ಶೆಡ್ನಲ್ಲಿ ಹಲವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿ ಬಿಟ್ಟು ಕಳುಹಿಸಿದ್ದರು. ಇದೇ ಶೆಡ್ನಲ್ಲಿ ರೇಣುಕಸ್ವಾಮಿ ಅವರನ್ನು ಕೊಂದಿದ್ದರು ಎಂಬ ಸಂಗತಿಯನ್ನು ಪುರಾವೆ ಸಮೇತ ಪತ್ತೆ ಮಾಡಿದ್ದಾರೆ.
ರೇಣುಕಸ್ವಾಮಿ ಅವರನ್ನು ಆರೋಪಿಗಳು ಸಂಪರ್ಕಿಸಿದ್ದ ಮೊದಲ ದಿನದಿಂದ ಹಿಡಿದು ಠಾಣೆಗೆ ಬಂದು ಶರಣಾಗುವ ದಿನದವರೆಗಿನ ಹಲವು ಪುರಾವೆಗಳು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು, ಮೊಬೈಲ್ ಸಂಭಾಷಣೆ ವಿವರ, ಮೊಬೈಲ್ ನೆಟ್ವರ್ಕ್ ಮಾಹಿತಿ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಶೆಡ್ ಮಾಲೀಕ ಎನ್ನಲಾದ ಜಯಣ್ಣ ಹಾಗೂ ಭದ್ರತಾ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ.
ದರ್ಶನ್, ಕೆಲ ವರ್ಷಗಳಿಂದ ವಿಪರೀತ ಮದ್ಯ ಕುಡಿಯುತ್ತಿದ್ದು, ಅವರ ಹಿಂದೆ–ಮುಂದಿರುವ ಹುಡುಗರೂ ಮದ್ಯವ್ಯಸನಿಗಳು. ಎಲ್ಲರೂ ಸೇರಿ ತಮ್ಮ ವಿರೋಧಿಗಳನ್ನು ಅಪಹರಿಸಿಕೊಂಡು ಬಂದು, ಥಳಿಸುತ್ತಿದ್ದರು. ನಟ ದರ್ಶನ್ ಕಡೆಯಿಂದ ಹಲವು ನಿರ್ಮಾಪಕರು, ನಿರ್ದೇಶಕರು, ಸಹ ನಟರು, ಕೆಲ ಉದ್ಯಮಿಗಳು ಸಹ ಏಟು ತಿಂದಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಲಭ್ಯವಾಗಿದೆ. ದೊಡ್ಡ ನಟ ಎಂಬ ಕಾರಣಕ್ಕೆ ಯಾರೂ ದೂರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಹಲವರ ಮೇಲೆ ರಾತ್ರಿ ಹಲ್ಲೆ ಮಾಡುತ್ತಿದ್ದ ದರ್ಶನ್, ಬೆಳಿಗ್ಗೆ ಅವರನ್ನು ಪುನಃ ಮನೆಗೆ ಕರೆಸಿ ಹಣ ಕೊಟ್ಟು ಕಳುಹಿಸಿದ್ದ ಘಟನೆಗಳೂ ನಡೆದಿವೆ. ಜೊತೆಗೆ, ಎಲ್ಲಿಯೂ ಬಹಿರಂಗವಾಗಿ ಯಾರ ಮೇಲೂ ಹಲ್ಲೆ ಮಾಡಿಲ್ಲ. ಯಾರನ್ನಾದರೂ ಅಪಹರಣ ಮಾಡಬೇಕಾದರೆ, ಸಹಚರರ ಮೂಲಕ ಮಾಡಿಸುತ್ತಿದ್ದರು. ನಂತರ, ಶೆಡ್ಗೆ ಹೋಗಿ ಬೆದರಿಕೆಯೊಡ್ಡುತ್ತಿದ್ದರು. ಕೆಲವರ ಮೇಲಂತೂ ವಿಪರೀತ ಎನಿಸುವಂತೆ ದಬ್ಬಾಳಿಕೆ ನಡೆಸಿದ್ದರೆಂಬ ಮಾಹಿತಿ ಇದೆ ಎಂದು ಹೇಳಿವೆ.
ಅಮಾನುಷ ರೀತಿಯಲ್ಲಿ ಹತ್ಯೆ
ರೇಣುಕಸ್ವಾಮಿ ಸಣ್ಣ ದೇಹವುಳ್ಳ ವ್ಯಕ್ತಿ. ಆರಡಿ ಎತ್ತರದ ನಟ ದರ್ಶನ್, ರೇಣುಕಸ್ವಾಮಿ ಅವರನ್ನು ಎತ್ತಿ ಎತ್ತಿ ಬಿಸಾಕಿದ್ದರು. ಮರ್ಮಾಂಗಕ್ಕೆ ಒದ್ದು, ತಲೆಗೆ ಕಟ್ಟಿಗೆಯ ತುಂಡಿನಿಂದ ಹೊಡೆದಿದ್ದರು. ಹಲ್ಲೆಯ ಇಂಚಿಂಚು ಮಾಹಿತಿಯನ್ನು ಸಹಚರರು ಬಾಯ್ಬಿಟ್ಟಿದ್ದಾರೆ. ಜೊತೆಗೆ, ಕೃತ್ಯವನ್ನು ನೋಡಿದ ಕೆಲ ಪ್ರತ್ಯಕ್ಷ ಸಾಕ್ಷಿಗಳೂ ಇದ್ದಾರೆ.
ಜೂನ್ 8ರಂದು ಮಧ್ಯಾಹ್ನ ನಗರದ ಪಬ್ವೊಂದರಲ್ಲಿ ನಟ ದರ್ಶನ್ ಹಾಗೂ ಇತರರು, ಪಾರ್ಟಿ ಮಾಡುತ್ತಿದ್ದರು. ‘ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದೇವೆ ಎಂಬುದಾಗಿ ಸಹಚರರು, ದರ್ಶನ್ಗೆ ಕರೆ ಮಾಡಿ ತಿಳಿಸಿದ್ದರು. ದರ್ಶನ್ ರಾತ್ರಿವರೆಗೂ ಪಬ್ನಲ್ಲಿದ್ದರು. ಶೆಡ್ಗೆ ಬಂದಿದ್ದೇವೆ ಎಂಬುದಾಗಿ ಸಹಚರ ಹೇಳುತ್ತಿದ್ದಂತೆ, ಸಿಟ್ಟಿನಿಂದಲೇ ಪಬ್ನ ಕುರ್ಚಿಯಿಂದ ಎದ್ದಿದ್ದ ದರ್ಶನ್ ಕಾರು ಏರಿ ಶೆಡ್ನತ್ತ ಹೊರಟಿದ್ದರು. ಸಹಚರರು, ಅವರನ್ನು ಹಿಂಬಾಲಿಸಿದ್ದರು. ಈ ಎಲ್ಲ ದೃಶ್ಯಗಳೂ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸೂಕ್ತ ಪುರಾವೆಗಳು ಇದ್ದಿದ್ದರಿಂದಲೇ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಹಾಗೂ ಸಹಚರರು, ಅಕ್ರಮ ಕೂಟ ಕಟ್ಟಿಕೊಂಡು ಕೃತ್ಯ ಎಸಗಿದ್ದಾರೆ. ರೌಡಿ ಪಟ್ಟಿಗೆ ದರ್ಶನ್ ಹೆಸರು ಸೇರಿಸಲು ಕಾನೂನಿನಲ್ಲಿ ಅವಕಾಶಗಳಿವೆ.